ಅರಕಲಗೂಡು(ಹಾಸನ): ಕೊಳಚೆ ನಿರ್ಮೂಲನಾ ಮಂಡಳಿ ಅವಶ್ಯಕತೆ ಇರುವ ಸ್ಥಳದಲ್ಲಿ ಕಾಮಗಾರಿ ಮಾಡದೆ ಅವಶ್ಯಕತೆ ಇಲ್ಲದ ಜಾಗದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಸಿ ಇಲಾಖೆಯ ಮೂಲ ಉದ್ದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ನಿಖಿಲ್, ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ 17ನೇ ವಾರ್ಡ್ ಹೆಂಟಿಗೆರೆ ಕೊಪ್ಪಲು ಗ್ರಾಮಕ್ಕೆ ಸುಮಾರು 25 ಲಕ್ಷ ರೂ. ಅಂದಾಜು ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ವಾರ್ಡ್ನ ನಾನಾ ಕಡೆ ಅಗತ್ಯವಾಗಿ ರಸ್ತೆ ಮತ್ತು ಚರಂಡಿ ನಿರ್ಮಾಣವಾಗಬೇಕು. ಆದರೆ ರಾಜಕೀಯವಾಗಿ ಮಂಡಳಿ ಅಧಿಕಾರಿಗಳು ಸೂಕ್ತ ಸ್ಥಳಗಳಲ್ಲಿ ನಿರ್ಮಿಸಬೇಕಾದ ರಸ್ತೆ ಮತ್ತು ಚರಂಡಿಗಳನ್ನು ಅನಗತ್ಯ ಇರುವಲ್ಲಿ ನಿರ್ಮಾಣ ಮಾಡಿ ಲೋಪವೆಸಗಿದ್ದಾರೆ ಎಂದು ಕಾಮಗಾರಿ ಪರಿಶೀಲನೆಗೆ ಬಂದ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.