ಕರ್ನಾಟಕ

karnataka

ETV Bharat / state

ಮಳೆಯಿಲ್ಲದೇ ಒಣಗುತ್ತಿದೆ ಹೊಗೆಸೊಪ್ಪು: ಬೆಳೆಗಾರರು ಕಂಗಾಲು - ಹೊಗೆಸೊಪ್ಪು ಬೆಳೆಯಲು ಮಳೆಯ ಕೊರತೆ ಸುದ್ದಿ

ಹಾಸನ ಜಿಲ್ಲೆಯ ಅರಕಲಕೂಡು ತಾಲೂಕಿನ ಹಲವು ಪ್ರದೇಶಗಳಲ್ಲಿ ಮಳೆಯಾಗದ ಕಾರಣ ಹೊಗೆಸೊಪ್ಪು ಬೆಳೆ ಒಣಗಲಾರಂಭಿಸಿದೆ. ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ.

tobbaco crop drying due to lack of rain
ಮಳೆಯಿಲ್ಲದೆ ಒಣಗುತ್ತಿದೆ ಹೊಗೆಸೊಪ್ಪು

By

Published : Jun 19, 2020, 10:30 AM IST

ಅರಕಲಗೂಡು:ರಾಮನಾಥಪುರ ಹೋಬಳಿಯ ಹೊಗೆಸೊಪ್ಪು ಗಿಡಗಳು ವರುಣನ ಅವಕೃಪೆಗೆ ತುತ್ತಾಗಿ ಒಣಗಲಾರಂಭಿಸಿದ್ದು, ಬೆಳೆಯನ್ನೇ ನೆಚ್ಚಿಕೊಂಡಿದ್ದ ರೈತರ ಬದುಕನ್ನು ಹೈರಾಣಾಗಿಸಿವೆ.

ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಸಾವಿರಾರು ರೈತರ ಆದಾಯದ ಮೂಲವಾಗಿದ್ದು, ಜೀವನ ನಿರ್ವಹಣೆಗೂ ಆಸರೆಯಾಗಿದೆ. ತಂಬಾಕು ಮಾರುಕಟ್ಟೆ ವ್ಯಾಪ್ತಿಯ ಕೊಣನೂರು, ದೊಡ್ಡಮಗ್ಗೆ, ಗುಬ್ಬಿ, ಬೆಳವಾಡಿ, ಹಳ್ಳಿಮೈಸೂರು, ಹೆಬ್ಬಾಲೆ, ಶಿರಂಗಾಲ, ಸಾಲಿಗ್ರಾಮ ಹೋಬಳಿ ಭಾಗದಲ್ಲಿ ಬಹುತೇಕ ರೈತರು ಹೊಗೆಸೊಪ್ಪು ನಾಟಿ ಮುಗಿಸಿ ರಸಗೊಬ್ಬರ ನೀಡಿ ಗಿಡಗಳ ಆರೈಕೆಯಲ್ಲಿ ತೊಡಗಿದ್ದಾರೆ. ಗಿಡಗಳ ಬೆಳವಣಿಗೆಗೆ ಬೇಕಾದ ನೀರಿನ ಕೊರತೆ ಮಾತ್ರ ವಿಪರೀತವಾಗಿದೆ. ಕೆಲವು ಕಡೆ ಹನಿ ಮಳೆಯೂ ಬಿದ್ದಿಲ್ಲ. ಹೀಗಾಗಿ ನಿತ್ಯವೂ ಹದ ಮಳೆಗಾಗಿ ರೈತರು ಮುಗಿಲಿನತ್ತ ಮುಖ ಮಾಡಿ ಜಾತಕ ಪಕ್ಷಿಯಂತೆ ಕಾದು ಕಂಗಾಲಾಗಿದ್ದಾರೆ.

ಮಳೆಯಿಲ್ಲದೆ ಒಣಗುತ್ತಿದೆ ಹೊಗೆಸೊಪ್ಪು

ಹೊಗೆಸೊಪ್ಪು ಗಿಡಗಳನ್ನು ನೀರಾವರಿ ಪ್ರದೇಶಕ್ಕಿಂತ ಮಿಗಿಲಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗಿದೆ. ನೀರಾವರಿ ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಜಮೀನು ಹಲವೆಡೆ ಮೋಟಾರ್ ಪಂಪ್ ಮೂಲಕ ಕೆಲವೇ ರೈತರು ಬೆಳೆಗೆ ಅಲ್ಪಸ್ವಲ್ಪ ನೀರು ಹಾಯಿಸಿಕೊಂಡು ಬೆಳೆ ರಕ್ಷಣೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಹೆಚ್ಚಿನದಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಗಿಡಗಳು ನೆಲಬಿಟ್ಟು ಮೇಲೆಳದಾಗಿದ್ದು, ರೈತರು ತಲೆಮೇಲೆ ಕೈಹೊತ್ತು ಕೂರುವ ಸ್ಥಿತಿ ಎದುರಾಗಿದೆ.

ಕಳೆದ ಬಾರಿಯೂ ಅತಿವೃಷ್ಟಿ, ಅನಾವೃಷ್ಟಿ ನಡುವೆಯೂ ಹೇಗೋ ರೈತರು ತಂಬಾಕು ಉತ್ಪಾದಿಸಿದ್ದರು. ಆದರೆ ದುರಾದೃಷ್ಟವಶಾತ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾಗಿ ತಂಬಾಕು ಬೆಲೆ ಕುಸಿದು ನಷ್ಟ ಅನುಭವಿಸಿದ್ದರು. ಕಡೆ ಹಂತದ ಹರಾಜು ಪ್ರಕ್ರಿಯೆ ವೇಳೆ ಮಾರುಕಟ್ಟೆಯಲ್ಲಿ ಬೇಲ್‌ಗಳನ್ನು ಸಹ ಮಾರಾಟ ಮಾಡಲಾಗದೇ ಪಜೀತಿಗೆ ಒಳಗಾಗಿದ್ದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು. ಇನ್ನು ಈ ವರ್ಷದ ಬೆಳೆಗೆ ಆರಂಭದಲ್ಲೇ ಮಳೆ ಕೈಕೊಟ್ಟಿದೆ. ತಂಬಾಕು ಬೆಳೆಗೆ ಈಗಾಗಲೇ ಅಪಾರ ಹಣ ವ್ಯಯಿಸಲಾಗಿದೆ. ಬೆಳೆಗೆ ಮಳೆಯ ಅಭಾವದಿಂದ ಗಿಡಗಳು ಬೆಳವಣಿಗೆ ಕಾಣದಾಗಿ ಒಣಗುತ್ತಿವೆ. ಸದ್ಯದಲ್ಲೇ ಮಳೆ ಬೀಳದಿದ್ದರೆ ಜೀವನಕ್ಕೆ ಆಧಾರವಾಗಿದ್ದ ಬೆಳೆ ಕೈಕೊಡುವ ಆತಂಕ ಮೂಡಿಸಿದೆ.

For All Latest Updates

ABOUT THE AUTHOR

...view details