ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಕೊರೊನಾದಿಂದಾಗಿ ಈ ವರ್ಷ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ. ಆದರೆ ಈ ವಿಷಯದಲ್ಲಿ ಜನಪ್ರತಿನಿಧಿಗಳ ಇಬ್ಬಗೆ ನೀತಿ ಹಾಸನದ ಜನರ ಕೋಪಕ್ಕೆ ಕಾರಣವಾಗಿದೆ.
ನಗರದ ಹೊಸ ಲೈನ್ ರಸ್ತೆಯಲ್ಲಿರುವ ಹಾಸನಾಂಬ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆರೆದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಹಲವು ಪವಾಡಗಳಿಗೆ ಪ್ರಸಿದ್ಧಿಯಾದ ಹಾಸನನಾಂಬ ದೇವಿಯ ದರ್ಶನವನ್ನ ಪಡೆದರೆ ಇಷ್ಟಾರ್ಥ ಸಿದ್ಧಿಸುತ್ತೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ವರ್ಷಕ್ಕೊಮ್ಮೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆದಾಗ ಲಕ್ಷಾಂತರ ಜನ ದೇವಾಲಯಕ್ಕೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದರು.
ಈ ವರ್ಷ ಹಾಸನಾಂಬ ದೇವಿ ದರ್ಶನಕ್ಕೆ ಸಾರ್ವಜನಿಕರಿಗಿಲ್ಲ ಅವಕಾಶ ಈ ವರ್ಷವೂ ಕೂಡ ನವೆಂಬರ್ 5ರಿಂದ 16ರವರೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ನಗರದ ಸುಮಾರು 12 ಕಡೆ ಎಲ್‌ಇಡಿ ಪರದೆ ಹಾಕಿ, ನೇರ ಪ್ರಸಾರದ ಮೂಲಕ ಭಕ್ತರು ಹಾಸನಾಂಬೆಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಬಾಗಿಲು ತೆರೆಯುವ ವೇಳೆ ಉದ್ಘಾಟನೆಗೆ ಬರುವಂತೆ ಸಿಎಂ ಅವರನ್ನು ಕರೆಯುತ್ತೇವೆ. ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹಾಸನ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.
ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಬ್ಬಗೆ ನೀತಿ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನಾಂಬ ದೇವಾಲಯದ ಬಾಗಿಲು ತೆರೆದ ಮೊದಲನೇ ಮತ್ತು ಕೊನೆಯ ದಿನ ಆಹ್ವಾನಿತ ಗಣ್ಯರಿಗೆ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ಅಂತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ತಮಗೆ ಬೇಕಾದ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಶ್ರೀಮಂತರಿಗೆ ಇವರು ದರ್ಶನ ಭಾಗ್ಯ ಕೊಡಲು ಆಹ್ವಾನಿತರಿಗಷ್ಟೇ ಅವಕಾಶ ನಿಡುತ್ತಿದ್ದಾರೆ. ಹಾಗಾದರೆ ಅವರಿಂದ ಯಾರಿಗೂ ಕೊರೊನಾ ಹರಡುವುದಿಲ್ಲವೇ. ಈ ದೇಶಕ್ಕೆ ಕೊರೊನಾ ಹರಡಿದ್ದೆ ವಿಐಪಿಗಳಿಂದ. ಈಗ ಆ ವಿಐಪಿಗಳು ಇಲ್ಲಿಗೆ ಬಂದು ಕೊರೊನಾ ಹರಡೋದು ಬೇಡ. ಸಾಮಾನ್ಯ ಭಕ್ತರಿಗೆ ನೇರ ದರ್ಶನ ವ್ಯವಸ್ಥೆ ಇಲ್ಲ ಎಂದ ಮೇಲೆ ಯಾರಿಗೂ ನೇರ ದರ್ಶನದ ವ್ಯವಸ್ಥೆ ಕಲ್ಪಿಸದೆ, ಎಲ್ಲರಿಗೂ ಒಂದೇ ಕಾನೂನು ಪಾಲಿಸಲಿ. ದೇವರ ದರ್ಶನ ವಿಷಯವಾಗಿ ತಾರತಮ್ಯ ಮಾಡಬೇಡಿ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.