ಹೊಳೆನರಸೀಪುರ/ಹಾಸನ: ಕಾಡಿನಲ್ಲಿರುವ ಹುಲಿಯನ್ನು ಬಂಧಿಸಿ ಬೋನಿನಲ್ಲಿ ಇಟ್ಟರೂ ಅದು ಹುಲ್ಲು ತಿನ್ನಲಾರದು. ಅದೇ ರೀತಿ ವೀರಶೈವ ಲಿಂಗಾಯತ ಸಮಾಜವು ಈ ಭಾಗದಲ್ಲಿ ಬಸವಣ್ಣನ ನೀತಿಯಂತೆ ಕೂರುವ ಅವಶ್ಯಕತೆ ಇಲ್ಲ ಎಂದು ಯುವಕರಿಗೆ ಹೇಳುವ ಮೂಲಕ, ತಂದೆಯನ್ನು ನೆನೆದು ಹೈಕಮಾಂಡ್ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಪರೋಕ್ಷ ಅಸಮಾಧಾನ ತೋರಿಸಿದ್ದು ಕಂಡುಬಂತು.
ಪಟ್ಟಣದ ಬಸವ ಭವನದ ಮುಂಭಾಗದಲ್ಲಿ ಶನಿವಾರ ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮೂಲಕ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಹಾಗೂ ಮಹಿಳೆಯರಿಗೂ ಹಕ್ಕನ್ನು ಕೊಡುವ ಜತೆಗೆ ಎಲ್ಲಾ ಜನಾಂಗದ ಮಠ ಮಾನ್ಯಗಳಿಗೆ ಪ್ರೇರಣೆಯಾಗಿದ್ದಾರೆ. ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು. ಧರ್ಮ ದೊಡ್ಡದಲ್ಲ, ದಯೆ ದೊಡ್ಡದು ಎಂಬ ಶೇಷ್ಠ ಸಂದೇಶ ನೀಡಿದ ಬಸವೇಶ್ವರರ ಸಾಮಾಜಿಕ ಕಾಂತ್ರಿಯು ಜಗತ್ತಿಗೆ ಮೊದಲ ಸಮಾನತೆಯ ಸಂದೇಶವನ್ನು ಕೊಟ್ಟಿದೆ ಎಂದರು.