ಹಾಸನ: ಮೀಟರ್ ಬಡ್ಡಿ ದಂಧೆಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೇಮಾವತಿ ನಗರದಲ್ಲಿ ನಡೆದಿದೆ. ಸತ್ಯಪ್ರಸಾದ್ (54), ಅನ್ನಪೂರ್ಣ (50), ಗೌರವ್ (21) ಸಾವಿಗೀಡಾದ ಒಂದೇ ಕುಟುಂಬದ ಸದಸ್ಯರು. ಪತಿ - ಪತ್ನಿ ಹಾಗೂ ಪುತ್ರ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಆದ್ರೆ, ಸ್ಥಳೀಯರ ಪ್ರಕಾರ ಕುಟುಂಬ ಇತ್ತಿಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಎಂಬ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಹಾಸನ ಮತ್ತು ಬೇಲೂರು ರಸ್ತೆಯ ಇಬ್ದಾಣೆ ಗ್ರಾಮದ ಸಮೀಪ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ನೆಡೆಸುತ್ತಿದ್ದ ಈ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಅದನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು.
ಇತ್ತೀಚಿಗಷ್ಟೆ ಖಾಸಗಿ ಫೈನಾನ್ಸ್ ಮೂಲಕ ಐಷಾರಾಮಿ ಕಾರು ಸಹ ಖರೀದಿ ಮಾಡಿದ್ದರು. ಸಾಲದ ಸುಳಿಗೆ ಸಿಲುಕಿದ್ದರಿಂದ ಐಷಾರಾಮಿ ಕಾರನ್ನು ಬಡ್ಡಿದಂದೆ ಕೋರರು ಮೂರುದಿನಗಳ ಹಿಂದಷ್ಟೆ ವಶಕ್ಕೆ ಪಡೆದುಕೊಂಡು ಹೋಗಿದ್ದರು ಎನ್ನಲಾಗಿದೆ. ವಾರದ ಹಿಂದಷ್ಟೆ ಮಗನಿಗೆ ಉಪನಯನ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮನೆಯಲ್ಲಿಯೇ ನೆರವೇರಿಸಿದ್ದರು. ಮೈಸೂರಿನಲ್ಲಿ ಓದುತ್ತಿದ್ದ ಮಗ ನಾಳೆ ಮತ್ತೆ ಕಾಲೇಜಿಗೆ ಹೋಗಬೇಕಿತ್ತು. ಇಂದು ಮೃತರ ಅತ್ತೆ ಸೀತಾಲಕ್ಷ್ಮಿ ಸೊಸೆ ಅನ್ನಪೂರ್ಣರನ್ನು ಎಬ್ಬಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.