ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 3 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ. ಈವರೆಗೆ 237 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 77 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಸೋಂಕಿನಿಂದ ಸಾವನ್ನಪ್ಪಿದ್ದಾನೆ.
ಇಂದು ಪತ್ತೆಯಾದ 3 ಪ್ರಕರಣಗಳಲ್ಲಿ ಒಬ್ಬರು ಆಲೂರು ತಾಲೂಕಿನವರಾಗಿದ್ದು, ಮತ್ತೊಬ್ಬರು ಬೇಲೂರು ತಾಲೂಕಿನವರು ಹಾಗೂ ಇನ್ನೊಬ್ಬ ವ್ಯಕ್ತಿ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ.
ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಚೀಲನಾಯಕನಹಳ್ಳಿ ಗ್ರಾಮಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ 24 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಹಾಸನದಲ್ಲಿಂದು ಮೂರು ಕೊರೊನಾ ಪ್ರಕರಣ ಪತ್ತೆ ಸೋಂಕಿತ ವ್ಯಕ್ತಿಯ ತಂದೆ, ತಾಯಿಯನ್ನು ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸೋಂಕಿತ ವ್ಯಕ್ತಿ ಹೋಗಿದ್ದಾನೆಂದು ಹೇಳಲಾದ ರಾಜಗೆರೆ, ಬಸ್ತಿಹಳ್ಳಿ, ಹಾಗೂ ಹಳೇಬೀಡಿನಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಸಿಬ್ಬಂದಿ, ಗ್ರಾ.ಪಂ. ನೌಕರರು, ಆಶಾ ಕಾರ್ಯಕರ್ತೆಯರು ನಿರತರಾಗಿದ್ದಾರೆ.
ಚೀಲನಾಯಕನಹಳ್ಳಿ ಗ್ರಾಮದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲಾಗಿದೆ. ಸೀಲ್‌ಡೌನ್ ಪ್ರದೇಶಕ್ಕೆ ಸ್ಯಾನಿಟೈಸೇಷನ್ ಮಾಡಿಸಲಾಗುವುದು. ಗ್ರಾಮಸ್ಥರು ತುರ್ತು ಸಂದರ್ಭ ಮಾತ್ರ ಮನೆಯಿಂದ ಹೊರಬರಬೇಕೆಂದು ತಿಳಿಸಲಾಗಿದೆ ಎಂದು ಪಂಚಾಯಿತಿ ಟಾಸ್ಕ್‌ಪೋರ್ಸ್ ಸಮಿತಿಯ ಪಿಡಿಒ ರವಿಕುಮಾರ್ ಹೇಳಿದರು. ಶಾಸಕ ಲಿಂಗೇಶ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು.