ಸಕಲೇಶಪುರ:ಪ್ರವಾಸಿಗರ ಸೋಗಿನಲ್ಲಿ ಬಂದು ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಮೂವರನ್ನು ಸ್ಥಳೀಯರು ಹಿಡಿದು ಪೋಲಿಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮಂಜ್ರಾಬಾದ್ ಕೋಟೆ ಸಮೀಪದ ಕ್ಯಾಂಟೀನ್ ವೊಂದರಲ್ಲಿ ತಿನಿಸುಗಳನ್ನು ಖರೀದಿ ಮಾಡಿ ನೋಟೊಂದನ್ನು ಅಂಗಡಿಯವನಿಗೆ ನೀಡಿ ಕೋಟೆ ನೋಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿ ಮಾಲೀಕನಿಗೆ ನೋಟಿನ ಬಗ್ಗೆ ಅನುಮಾನ ಬಂದು ಹೆದ್ದಾರಿ ಗಸ್ತಿನಲ್ಲಿದ್ದ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯಿಂದ ಖೋಟಾ ನೋಟು ಚಲಾವಣೆಗೆ ಯತ್ನ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಕೋಟೆ ನೋಡಿಕೊಂಡು ಬಂದ ಮಹಿಳೆಯ ಪರ್ಸ್ ಪರಿಶೀಲಿಸಿದಾಗ 500ರೂಗಳ ಹಲವು ಬಂಡಲ್ ಖೋಟಾ ನೋಟು ಕಂಡು ಬಂದಿದೆ. ಈ ವೇಳೆ ಮಹಿಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಆದರು ಹರ ಸಾಹಸ ಮಾಡಿ ಮಹಿಳೆಯನ್ನು ಹಿಡಿಯಲಾಗಿದೆ.
ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಮಹಿಳೆ ಹಾಗೂ ಈಕೆಯ ಜೊತೆ ಇನ್ನಿಬ್ಬರು ಬಂದಿದ್ದು, ತಾಯಿ, ತಂದೆ, ಮಗ ಎಂದು ಹೇಳಲಾಗುತ್ತಿದೆ. ಹೆದ್ದಾರಿ ಗಸ್ತಿನವರು ಆರೋಪಿಗಳನ್ನು ನಗರ ಠಾಣೆಗೆ ಒಪ್ಪಿಸಿದ್ದು ಈ ಕುರಿತು ದೂರು ದಾಖಲಿಸಿ ತನಿಖೆ ಮಾಡಲಾಗುತ್ತಿದೆ.