ಹಾಸನ: ವೃದ್ಧೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ (42) ಬಂಧಿತ ಆರೋಪಿ. ಅರಕಲಗೂಡು ತಾಲೂಕಿನ ಕಾರೇಹಳ್ಳಿ ಗ್ರಾಮದವನಾದ ರವಿಕುಮಾರ್, ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣವನ್ನು ದೋಚಿ ಪಾರಾರಿಯಾಗಿದ್ದ.
ಪ್ರಕರಣದ ವಿವರ: ಕಳೆದ 10 ದಿನಗಳ ಹಿಂದೆ ಆರೋಪಿ ರವಿಕುಮಾರ್, ಅರಕಲಗೂಡು ತಾಲೂಕಿನ ಶೆಟ್ಟರಕೊಪ್ಪಲು ಗ್ರಾಮದ ಸರೋಜಮ್ಮನ ಮನೆಗೆ ತೆರಳಿ ಹಸು ವ್ಯಾಪಾರಕ್ಕೆ ಬಂದಿರುವುದಾಗಿ ತಿಳಿಸಿದ್ದ. ಜಾನುವಾರು ಮಾಲೀಕರಾದ ಸರೋಜಮ್ಮ ಮತ್ತು ಅವರ ಸೊಸೆ ರಾಣಿ ಹಸು ಮಾರಾಟ ಮಾಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು. ಬಳಿಕ ನ.19ರಂದು ಮತ್ತೆ ಅದೇ ಗ್ರಾಮಕ್ಕೆ ಬಂದು ಮನೆಯಲ್ಲಿ ಯಾರೂ ಇಲ್ಲದ ವಿಚಾರವನ್ನು ತಿಳಿದುಕೊಂಡು ಸರೋಜಮ್ಮನ ಬಳಿ ಹಸುವನ್ನು ಮಾರಾಟ ಮಾಡುವ ವಿಚಾರದಲ್ಲಿ ಸುಖಾಸುಮ್ಮನೆ ಕ್ಯಾತೆ ತೆಗೆದಿದ್ದ.
ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿ ದೊಣ್ಣೆಯಿಂದ ವೃದ್ಧೆಯ ತಲೆಗೆ ಹೊಡೆದಿದ್ದ. ಬಳಿಕ ವೃದ್ಧೆ ಸಾವನ್ನಪ್ಪಿದ ವಿಚಾರ ತಿಳಿದು ಆಕೆಯ ಮೈಮೇಲೆ ಇದ್ದ ಒಂದು ಜೊತೆ ಓಲೆ, 2 ಕಿವಿಯ ಮಾಟಿ, 2 ಕಾಸಿನ ಕರಿಮಣಿಯ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮೃತಳ ಮಗ ನಾರಾಯಣ್ ಕೊಟ್ಟ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪ್ರಕರಣ ಸಂಬಂಧ ಅರಕಲಗೂಡು ವೃತ್ತ ಸಿಪಿಐ ಎಸ್.ಎಂ.ರಘುಪತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯನ್ನು ಶನಿವಾರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 65 ಸಾವಿರ ಮೌಲ್ಯದ 10ಗ್ರಾಂ ತೂಕದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ, "ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಸರೋಜಮ್ಮ ಎಂಬುವವರ ಕೊಲೆ ಸಂಬಂಧ ಅವರ ಮಗ ನೀಡಿದ ದೂರು ದಾಖಸಿಕೊಂಡಿದ್ದೆವು. ತನಿಖೆ ನಡೆಸಿದಾಗ ರವಿಕುಮಾರ್ ಎಂಬ ವ್ಯಕ್ತಿ ಚಿನ್ನಕ್ಕಾಗಿ ವೃದ್ಧೆಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದೇವೆ" ಎಂದು ತಿಳಿಸಿದರು.