ಹಾಸನ: ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿ ಬೇಕೋ-ಬೇಡವೋ ಎಂಬುದರ ಬಗ್ಗೆ ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರು ಸೇರಿ ಚಿಂತನಾ ಸಭೆ ನಡೆಸಿದರು.
ಡಾ. ಬಾಬು ಜಗಜೀವನ್ ರಾಮ್ ಮಾದಿಗ ಮಹಾಸಭಾ ವೇದಿಕೆಯ ಮುಖಂಡ ಕೃಷ್ಣದಾಸ್ ಮಾತನಾಡಿ, ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ, ಹೊಲೆಯ ಮಾದಿಗರು, ಡಾ.ಬಾಬು ಜಗಜೀವನ್ ರಾಮ್ ಮಾದಿಗ ಮಹಾಸಭಾ, ಅಂಬೇಡ್ಕರ್ ಯುವಕರ ಸಂಘ ಸೇರಿ ಎಲ್ಲಾ ದಲಿತ ಸಂಘದ ಮುಖಂಡರು ಸಭೆಯಲ್ಲಿದ್ದರು. ಮುಖ್ಯವಾಗಿ ಹೊಲೆಯ ಮಾದಿಗರು ಒಂದಾಗಬೇಕು ಎಂಬುದು ಪ್ರಮುಖ ಚರ್ಚೆಯಾಗಿ, ನಂತರ ಜಿಲ್ಲಾ ಮಟ್ಟದಲ್ಲಿ ಒಂದು ಸಭೆ ಮಾಡುವ ಯೋಚನೆ ಇದೆ ಎಂದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯಾವಾರು ಒಳ ಮೀಸಲಾತಿಗೆ ಸಂಬಂಧಪಟ್ಟ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್‌ಕುಮಾರ್ ಮಿಶ್ರಾರವರನ್ನು ಒಳಗೊಂಡ ಪಂಚ ನ್ಯಾಯಾಧೀಶರ ಪೀಠವು ಸಮಾನತೆ ತರುವುದಕ್ಕಾಗಿ ಎಲ್ಲರೂ ಮೀಸಲಾತಿ ನೀಡಲು ಒಳ ವರ್ಗೀಕರಣವನ್ನು ಮಾಡಲು ಅವಕಾಶ ಮಾಡಲಾಗಿದೆ ಎಂದು ಅಭಿಪ್ರಾಯ ಪಟ್ಟಿರುತ್ತದೆ. ಇದನ್ನು ಮಾದಿಗ ಸಮುದಾಯದ ಒಂದು ಆಶಾಕಿರಣ ಎಂದು ಭಾವಿಸುತ್ತದೆ ಎಂದು ತಿಳಿಸಿದರು.
ಇದರಂತೆ ಆಂಧ್ರದಲ್ಲಿ ಮಾದಿಗ ಸಮುದಾಯದವರು 30 ವರ್ಷ ಹೋರಾಟ ಮಾಡಿದ್ದಕ್ಕೆ ಅಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾದಿಗರಿಗೆ ಒಳಮೀಸಲಾತಿ ಕಲ್ಪಿಸಿದ್ದಾರೆ. ಇಲ್ಲಿ ಕಳೆದ 20 ವರ್ಷಗಳಿಂದ ಕರ್ನಾಟಕದಲ್ಲಿ ಮಾದಿಗ ಸಮುದಾಯದವರು ಒಳಮೀಸಲಾತಿ ವರ್ಗೀಕರಣಕ್ಕೆ ಹೋರಾಟ ಮಾಡಿಕೊಂಡು ಬಂದಿದ್ದು, ಇದರ ಫಲವಾಗಿ ಅಂದಿನ ಸರ್ಕಾರ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ರಚನೆ ಮಾಡಿತ್ತು ಎಂದರು.
ಕಳೆದ 20 ವರ್ಷದ ಹೋರಾಟದಲ್ಲಿ (ಕಾಂಗ್ರೆಸ್,ಬಿಜೆಪಿ, ಜನತಾದಳ) ಪಕ್ಷದ ಮುಖಂಡರು ಹಾಗೂ ಸಂಘಟನೆಗಳಿಂದ ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಾ ಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡುತ್ತಾರೆಂದು ಹೇಳಿ ಅವರ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ ಈವರೆಗೆ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.