ಹಾಸನ :ಇದೊಂದು ಆರೂವರೆ ಪರ್ಸೆಂಟ್ ಸರ್ಕಾರವಾಗಿದೆ. ಇದೇ ರೀತಿ ಲೂಟಿಕೋರತನ ಮುಂದುವರೆದರೆ ಜನಪ್ರತಿನಿಧಿಗಳೆಲ್ಲ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕೊರೊನಾ ರೋಗಿಗಳನ್ನು ನೋಡಿಕೊಳ್ಳಲು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಇಲ್ಲ, ಇಂಜೆಕ್ಷನ್ ಕೂಡ ಇರುವುದಿಲ್ಲ. ಇವೆಲ್ಲ ಗಮನಿಸಿದ್ರೆ ಕೋವಿಡ್ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂದೆನಿಸುತ್ತಿದೆ.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸರ್ಕಾರ ವಿರುದ್ಧ ವಾಗ್ದಾಳಿ ಹೇಮಾವತಿ ಜಲಾಶಯದಲ್ಲಿ ಈಗಾಗಲೇ 28 ಟಿಎಂಸಿ ನೀರಿದೆ. ಇನ್ನೆರಡು ದಿನಗಳಲ್ಲಿ ಅಣೆಕಟ್ಟು ಭರ್ತಿಯಾಗಲಿದೆ. ಈ ವೇಳೆಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚೆ ಮಾಡಬೇಕಾಗಿತ್ತು. ಆದರೆ, ಈವರೆಗೂ ಯಾವ ಸಭೆ ಕರೆದಿರುವುದಿಲ್ಲ. ಇವೆಲ್ಲಾ ಗಮನಿಸಿದರೆ ನೀರಾವರಿ ಇಲಾಖೆಯಲ್ಲಿ ಲೂಟಿ ಕೆಲಸ ಮಾಡಲಾಗುತ್ತಿದೆ. ಇದೊಂದು ಲೂಟಿಕೋರರ ಸರ್ಕಾರ ಎಂದು ಕಿಡಿಕಾರಿದರು.
ನೀರಾವರಿ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ಯಾವ ಕೆಲಸ ನಡೆಯುತ್ತಿಲ್ಲ. ದ್ವೇಷದ ರಾಜಕಾರಣ ಮಾಡುತ್ತಿರುವವರಿಗೆ ದೇವರೆ ಶಿಕ್ಷೆ ಕೊಡುವ ಕಾಲ ಹತ್ತಿರವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಆದರೆ, ಈವರೆಗೂ ಯಾವ ಅಭಿವೃದ್ಧಿ ಕೆಲಸಗಳು ಸರಾಗವಾಗಿ ನಡೆಯುತ್ತಿಲ್ಲ. ಯಾವುದೇ ಬಿಲ್ ಪಾಸ್ ಆಗಬೇಕಾದ್ರೆ ಶೇ. 6.5 ಭಾಗ ಕಮಿಷನ್ನಿಂದಲೇ ಬಿಲ್ ನಿರ್ಧಾರವಾಗಿ ಬರುತ್ತಿದೆ ಎಂದು ವ್ಯಂಗ್ಯವಾಡಿದರು.
ಕುಡಿಯುವ ನೀರಿಗೆ ಜಿಲ್ಲಾ ಪಂಚಾಯತ್ಗೆ 1 ಕೋಟಿ ರೂ. ಕೊಟ್ಟರು ಕೆಲಸ ಇನ್ನೂ ಪೂರ್ಣವಾಗಿಲ್ಲ. ಈ ಬಗ್ಗೆ ಜಿಪಂ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ಆದರೆ, ಯಾವುದೇ ಕಾಮಗಾರಿಗಳಿಗೆ ಅನುಮೋದನೆ ಮಾಡಿರುವುದಿಲ್ಲ ಎಂದು ದೂರಿದರು. ಹಾಸನ ಜಿಲ್ಲೆಯಲ್ಲಿ ಈಗಾಗಲೇ ಹೆಚ್ಚು ಮಳೆಯಾಗುತ್ತಿದೆ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೂ ಕನಿಷ್ಟ 2 ಕೋಟಿ ರೂ. ಪರಿಹಾರವಾಗಿ ನೀಡಬೇಕು ಎಂದರು.