ಹಾಸನ: ಶತಾಯ- ಗತಾಯ ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಆಡಳಿತ ಪಕ್ಷದ ಜಿಲ್ಲೆಯ ಏಕೈಕ ಶಾಸಕ ಪ್ರೀತಂ ಗೌಡ ತಮ್ಮ ಅಸಲೀ ಆಟ ಶುರುಮಾಡಿದ್ದು, ರೇವಣ್ಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರಾ ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದೆ.
ಹೌದು, ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಿ ಜಿಲ್ಲೆಯಲ್ಲಿ ಕಮಲವನ್ನರಳಿಸುವಲ್ಲಿ ಯಶಸ್ವಿಯಾಗಿರೋ ಬಿಜೆಪಿ ಶಾಸಕ ಪ್ರೀತಂಗೌಡ ಸೇಡಿನ ರಾಜಕೀಯಕ್ಕೆ ಮುಂದಾಗಿದ್ದಾರಾ..? ಎಂಬ ಪ್ರಶ್ನೆ ಉದ್ಭವವಾಗಿದೆ. ಜೆಡಿಎಸ್ ಪಾಳಯದಲ್ಲಿ ಕೇಸರಿ ಕಹಳೆಯೂದಿರೋ ಪ್ರೀತಂ ಗೌಡ ರೇವಣ್ಣ ಅವರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಕಳೆದ 14 ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಹೆಸರಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ಹೊಳೆನರಸೀಪುರದ ಶಾಸಕ ಹೆಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಸಾವಿರಾರು ಕೋಟಿ ಅನುದಾನ ಹೊತ್ತು ತಂದಿದ್ದರು.
ಇನ್ನು ಮೈತ್ರಿ ಸರ್ಕಾರ ಪತನವಾಗಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರೇವಣ್ಣ ಅನುಮೋದನೆಗೊಳಿಸಿದ್ದ ಅನುದಾನಗಳಿಗೆ ತಡೆ ಹಿಡಿಸುವಲ್ಲಿ ಪ್ರೀತಂ ಗೌಡ ಯಶಸ್ವಿಯಾಗಿದ್ದಾರೆ, ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಬ್ರೇಕ್ ಹಾಕಲು ಮುಂದಾಗುವ ಮೂಲಕ ರೇವಣ್ಣ ಅವರ ವಿರುದ್ಧ ಸಮರ ಸಾರಿದ್ದು, ಜಿಲ್ಲೆಗೆ ರೇವಣ್ಣ ಅವರು ತಂದಿರೋ ಅನುದಾನಗಳನ್ನು ಬೇರೆಡೆ ವಿನಿಯೋಗಿಸೋ ಮೂಲಕ ಪ್ರಚಾರ ಪಡೆಯೋ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆದರೆ, ರೇವಣ್ಣ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ.
ರೇವಣ್ಣ ಅವರಿಗೆ ಎಲ್ಲಿ ಹೆಸರು ಬಂದು ಬಿಡುತೋ ಎಂಬ ಏಕೈಕ ಕಾರಣಕ್ಕೆ ನಗರದ ಅಂದವನ್ನು ಹೆಚ್ಚಿಸಬಹುದಾದ ಒಂದು ಉತ್ತಮ ಯೋಜನೆಗೆ ಬ್ರೇಕ್ ಹಾಕಲು ಮುಂದಾಗಿರೋದು ಮಾತ್ರ ವಿಪರ್ಯಾಸವೇ ಸರಿ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಅವರು ಈ ಹಿಂದೆ ನಡೆದ ಕಾಮಗಾರಿಗಳಿಗೆಲ್ಲ ನಾನು ಪೋಸ್ಟ್ ಮಾರ್ಟಂ ಮಾಡಲು ಹೋಗಲ್ಲ ಎನ್ನುವ ಮೂಲಕ ಹಿಂದಿನ ಮೈತ್ರಿ ಸರ್ಕಾರದ ಕಾಮಗಾರಿಗಳನ್ನು ನಡೆಯಲು ಬಿಡಲ್ಲ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.