ಹಾಸನ:ರಾಜ್ಯ ಸಂಪುಟ ವಿಸ್ತರಣೆ ಯಾವುದೇ ತೊಂದರೆಗಳಿಲ್ಲದೆ ಸುಸೂತ್ರವಾಗಿ ನಡೆಯಲಿದ್ದು, ಗೊಂದಲದ ಮಾತೇ ಇಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಹಾಸನದ ಚನ್ನರಾಯಪಟ್ಟಣದ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸುಸೂತ್ರವಾಗಿ ನಡೆಯುತ್ತದೆ. ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲದ ಮೇಲೆ ಪ್ರಶ್ನೆ ಉದ್ಭವಿಸುವ ಮಾತೆಲ್ಲಿ? ಹಾಗಾಗಿ ಮುಖ್ಯಮಂತ್ರಿಗಳೇ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಪಡಿಸಲಿದ್ದಾರೆ ಎಂದು ಅವರು ಹೇಳಿದರು.
ಡಿಸಿಎಂ ಅಶ್ವತ್ಥ ನಾರಾಯಣ ಹೇಳಿಕೆ ವಿಶ್ವನಾಥ್ ಅವರು ಸಚಿವ ಸ್ಥಾನ ಕೇಳುವುದು ಸಹಜ. ಆದರೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನು ಹೇಳಿದೆಯೋ ಅದರಂತೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಈ ಸರ್ಕಾರ ರಚಿಸಲು ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ಕೊಡಬೇಕೆಂಬ ವಿಶ್ವನಾಥ್ ಅವರನ್ನು ಮುಖ್ಯಮಂತ್ರಿಗಳು ಸಮಾಧಾನ ಮಾಡುತ್ತಾರೆ. ಹೀಗೆ ಹೇಳುವ ಮೂಲಕ ಸೋತವರಿಗೆ ಯಾವುದೇ ಕಾರಣಕ್ಕೂ ಮಂತ್ರಿಸ್ಥಾನ ಕೊಡಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.
ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಆರ್.ಶಂಕರ್ರವರಿಗೂ ಖಂಡಿತ ಒಳ್ಳೆಯದಾಗುತ್ತದೆ. ಕಾಲ ಬಂದಾಗ ಮುಖ್ಯಮಂತ್ರಿಗಳೇ ಎಲ್ಲದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಗೌರವಯುತ ಸ್ಥಾನಮಾನ ದೊರಕಿದೆ, ಮುಂದೆಯೂ ದೊರೆಯಲಿದೆ ಎಂದರು.
ಹಾಸನದಲ್ಲಿ ನಿರ್ದೇಶಕರ ನಕಲಿ ಅಂಕಪಟ್ಟಿ ವಿಚಾರವಾಗಿ ಮಾತನಾಡಿದ ಅವರು, ರವಿ ಕುಮಾರ್ ರವರ ಎಲ್ಲಾ ದಾಖಲಾತಿಗಳು ಸರಿಯಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಮಾತಿಗೆ ವಿರಾಮವಿಟ್ಟರು.