ಹಾಸನ: ತಂತ್ರಜ್ಞಾನದ ಜೊತೆ ಮುನ್ನುಗ್ಗುತ್ತಿರುವ ನಾವು, ವಿದ್ಯುತ್ ಕೈಕೊಟ್ಟರೂ ಕೃತಕ ಬೆಳಕು ಪಡೆಯುವ ತಂತ್ರಜ್ಞಾನದ ಜೊತೆ ಬದುಕುತ್ತಿದ್ದೇವೆ. ಆದ್ರೆ ಇನ್ನೂ ಇದೊಂದು ಗ್ರಾಮದ ಸುಮಾರು 10 ಕುಟುಂಬಗಳು ದೀಪದ ಕೆಳಗಿನ ಕತ್ತಲಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ವಿದ್ಯುತ್ ಇಲ್ಲದೆ ಈ ಕುಟುಂಬಗಳು ಪರಿತಪಿಸುತ್ತಿವೆ.
ತಾಲೂಕಿನ ದುಮ್ಮಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡು ಕಳೆದ 20 ವರ್ಷಗಳಿಂದಲೂ ಜೀವನ ಸಾಗಿಸುತ್ತಿರುವ 10 ಕುಟುಂಬಗಳು, ವಿದ್ಯುತ್ ಸೌಲಭ್ಯವಿಲ್ಲದೇ ಸೀಮೆಎಣ್ಣೆ ಹಾಗೂ ಕ್ಯಾಂಡಲ್ ದೀಪದ ಬೆಳಕಿನಲ್ಲಿ ದಿನ ದೂಡುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಎಲ್ಲಾ ವರ್ಗದ ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೋಟಿ ಕೋಟಿ ಹಣ ಮೀಸಲಿರಿಸಿದೆ. ಅಲ್ಲದೆ ನಿರಂತರ ಜ್ಯೋತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಗ್ರಾಮೀಣ ಜನರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನೂ ಮಾಡಿದೆ. ಇಂತಹ ಸ್ಥಿತಿಯಲ್ಲಿಯೂ ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದ ಗೋಮಾಳದಲ್ಲಿ ವಾಸವಿರುವ 10 ದಲಿತ ಕುಟುಂಬಗಳು ಬೆಳಕಿನಿಂದ ವಂಚಿತವಾಗಿವೆ.
1991ರಲ್ಲಿ ನಮೂನೆ 53 ರಲ್ಲಿ ಗ್ರಾಮಸ್ಥರು ಬಗರ್ ಸಾಗುವಳಿ ಚೀಟಿಗೆ ಅರ್ಜಿ ಕೂಡ ಸಲ್ಲಿಸಿದ್ದಾರೆ. ಹೀಗಿದ್ದರೂ ಕೂಡ ಇನ್ನೂ ಮಂಜೂರಾತಿ ಪತ್ರ ದೊರೆತಿಲ್ಲ. ವಾಸವಿರುವ ಮನೆಗಳಿಗೆ ಸ್ಥಳೀಯ ಸಂತೆಮರೂರು ಗ್ರಾಪಂ ವತಿಯಿಂದ ಕುಡಿಯುವ ನೀರಿನ ನಲ್ಲಿಗಳು, ಚರಂಡಿ ಹಾಗೂ ರಸ್ತೆಯನ್ನು ಕಲ್ಪಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಮಾತ್ರ ಕಲ್ಪಿಸಿಲ್ಲ.