ಹಾಸನ:ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರವಾಸೋದ್ಯಮದ ದೃಷ್ಠಿಯಿಂದ ಹಾಸನ ಜಿಲ್ಲೆ ಒಂದು ಮಹತ್ವ ಪೂರ್ಣವಾಗಿರುವ ಜಿಲ್ಲೆಯಾಗಿದ್ದು, ಜಗತ್ಪ್ರಸಿದ್ಧವಾಗಿರುವ ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳ ಒಳಗೊಂಡಂತೆ ಒಟ್ಟು 70 ಪ್ರವಾಸೋದ್ಯಮ ಕೇಂದ್ರಗಳು ಇಲ್ಲಿವೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತಿಳಿಸಿದರು.
ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಜಿಲ್ಲೆಯ 53 ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವುದಕ್ಕೆ 56 ಕೋಟಿ ರೂ. ಅನುದಾನ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿ ಮಂಜೂರಾತಿ ದೊರಕಿದ್ದು, ಅದರಲ್ಲಿ 25 ಕೋಟಿ 69 ಲಕ್ಷ ರೂ ಹಣ ಬಿಡುಗಡೆಯಾಗಿದೆ. ಇನ್ನು 30 ಕೋಟಿ 35 ಲಕ್ಷ ರೂ ಅನುದಾನ ಬಾಕಿ ಇದೆ ಎಂದರು.
ಅತಿಥಿ ದೇವೋಭವ ಎನ್ನುವುದು ಭಾರತದ ಸಂಸ್ಕೃತಿ, ಅದನ್ನು ಪ್ರವಾಸಿ ಸ್ನೇಹಿಯನ್ನಾಗಿ ಮಾಡಬೇಕು. ಪ್ರತಿ ರಾಜ್ಯವೂ ಕೂಡ ಒಂದಾದರೂ ಜಗತ್ತನ್ನು ಸೆಳೆಯುವ ರೀತಿಯಲ್ಲಿ ಪ್ರವಾಸಿ ಕೇಂದ್ರವನ್ನು ಮೊದಲ ಹಂತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕೆಂದು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೃಷ್ಠಿಯಿಂದ ಜಿಲ್ಲೆಯಲ್ಲಿ 267 ಗ್ರಾಮ ಪಂಚಾಯಿತಿಗಳು, ರಾಜ್ಯದಲ್ಲಿ 2,574 ಗ್ರಾಮಗಳನ್ನು ಗುರುತಿಸಲಾಗಿದೆ. ಅದರಲ್ಲಿ ಉಪಗ್ರಾಮಗಳನ್ನು ಹೊರತುಪಡಿಸಿ ಜನವಸತಿ ಇರುವ ಗ್ರಾಮಗಳು 2,418, ನಿಮ್ಮ ಉರಿನ ಬಗ್ಗೆ ನಿಮಗೆಷ್ಟು ಗೊತ್ತು? ಎನ್ನುವ ಶೀರ್ಷಿಕೆಯಡಿಯಲ್ಲಿ ಗ್ರಾಮ ಮಾಹಿತಿಯನ್ನು ಸಂಗ್ರಹಿಸಿ ಗ್ರಾಮದ ಜನ ಜೀವನ, ಕಲೆ, ಸಂಸ್ಕೃತಿ, ಇತಿಹಾಸ, ಅಲ್ಲಿನ ಪ್ರಮುಖ ದೇವಾಲಯಗಳ ವಿಚಾರವನ್ನು ದಾಖಲಿಸುವ ಕೆಲಸ ಮಾಡುವ ಯೋಜನೆ ಮಾಡಲಾಗಿದೆ ಎಂದರು.