ಹಾಸನ:ದಾಂಪತ್ಯದಲ್ಲಿ ವಿರಸ ಮೂಡಿ ಪತಿಯಿಂದ ವಿಚ್ಛೇದನ ಬಯಸಿದ ಮಹಿಳೆಯನ್ನು ವಕೀಲ ಮಂಚಕ್ಕೆ ಕರೆದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಹೇಮಂತ್ ಕುಮಾರ್ ಎಂಬ ವಕೀಲನ ಮೇಲೆ ಈಗ ಓರ್ವ ಮಹಿಳೆ ಅತ್ಯಾಚಾರ ಮತ್ತು ಬ್ಲಾಕ್ ಮೇಲ್ ವಿಚಾರವಾಗಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಸಂಸಾರದಲ್ಲಿ ಗಂಡ-ಹೆಂಡಿರ ನಡುವೆ ವಿರಸ ಮೂಡಿ ವಿಚ್ಛೇದನಕ್ಕಾಗಿ ವಕೀಲ ಹೇಮಂತ್ ಬಳಿಗೆ ಕಳೆದ ಆರು ತಿಂಗಳ ಹಿಂದೆ ಯುವತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು.ಎರಡನೇ ಬಾರಿಗೆ ವಿಚ್ಛೇದನ ಪಡೆಯಲು ಬಯಸಿರುವ ಈಕೆಯನ್ನು ಹೇಗಾದರೂ ಮಾಡಿ ನನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ದುರಾಸೆಯಿಂದ ಹೇಮಂತ್ ಕೇಸಿನ ವಿಚಾರವನ್ನು ನೆಪ ಮಾಡಿಕೊಂಡು ಪದೇಪದೇ ಆಕೆಗೆ ಫೋನ್ ಮಾಡುವುದು, ವಾಟ್ಸಪ್ನಲ್ಲಿ ಮೆಸೇಜ್ ಮತ್ತು ವಿಡಿಯೋ ಕಾಲ್ ಮಾಡಿ ಆಕೆಗೆ ಹತ್ತಿರವಾಗಲು ಪ್ರಯತ್ನಿಸಿದ್ದಾನೆ. ವಿಡಿಯೋ ಕಾಲ್ ಮೂಲಕ ಆತ ಮನದಾಳದ ಬಯಕೆಯನ್ನು ಬಿಚ್ಚಿಟ್ಟಿದ್ದನಂತೆ.
ಆದರೆ ಆಕೆ ಯಾವುದಕ್ಕೂ ಸ್ಪಂದಿಸದ ಹಿನ್ನೆಲೆಯಲ್ಲಿ ಅಕ್ಟೋಬರ್ 6ರಂದು ಕರೆಮಾಡಿ ಕೇಸಿನ ಸಂಬಂಧ ಸ್ವಲ್ಪ ಮಾತನಾಡಬೇಕು ಕಚೇರಿಗೆ ಬನ್ನಿ ಅಂತ ಕರೆಸಿಕೊಂಡಿದ್ದಾನೆ. ಕರೆಸಿಕೊಂಡವನು ಏಕಾಏಕಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಪಟ್ಟಿದ್ದಾನಂತೆ. ಬಳಿಕ ಆಕೆ ಕೂಗಿಕೊಂಡಾಗ, ನೋಡು ನೀನು ಒಪ್ಪಿದರೆ ಇಬ್ಬರು ಸಂತೋಷದಿಂದ ಸುಖ ಅನುಭವಿಸಬಹುದು. ಇಲ್ಲವಾದರೆ ನಿನ್ನ ಮೇಲೆ ಆಪಾದನೆ ಬರುವಂತೆ ನ್ಯಾಯಾಲಯಲ್ಲಿ ನಾನೇ ಪ್ರಕರಣ ದಾಖಲಿಸುತ್ತೇನೆ ಅಂತ ಬೆದರಿಕೆಯೊಡ್ಡಿದ್ದಾನಂತೆ. ಅಷ್ಟೇ ಅಲ್ಲದೇ ಆಕೆಯ ಮುಂದೆಯೇ ಹೇಮಂತ್ ವಿವಸ್ತ್ರನಾಗೋ ಮೂಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾನಂತೆ.
ಕಚೇರಿಯಲ್ಲಿ ಅವನ ಅಶ್ಲೀಲತೆ ಮತ್ತು ಆಕೆಯೊಂದಿಗೆ ನಡೆದುಕೊಂಡ ರೀತಿಯನ್ನು ಸ್ವತಃ ಚಿತ್ರೀಕರಿಸಿ ಕಚೇರಿಯಲ್ಲಿ ನಡೆದ ಈ ಪ್ರಕರಣವನ್ನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ನಂತೆ. ಜೊತೆಗೆ ನವಂಬರ್ 4ರಂದು ಕೂಡ ನಗರದ ರಸ್ತೆಯೊಂದರಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಕಿರುಕುಳ ನೀಡುತ್ತಿದ್ದಾನೆ ಅಂತ ಆಕೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.