ಹಾಸನ:ಹಾವಿನ ದ್ವೇಷ 12 ವರ್ಷ ಎಂಬ ಮಾತಿದೆ. ಆದರೆ, ಈ ಒಂದು ಪ್ರಕರಣದಲ್ಲಿ 12 ದಿನಗಳ ಬಳಿಕ ದ್ವೇಷ ಸಾಧಿಸಿತಾ ಎಂಬ ಅನುಮಾನ ಕಾಡುತ್ತಿದೆ ಎಂಬ ಮಾತು ಸ್ಥಳೀಯರ ಬಾಯಿಂದ ಕೇಳಿ ಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ವಿಡಿಯೋವೊಂದು ವೈರಲ್ ಕೂಡಾ ಆಗಿದೆ.
ಅದು ಅ.29 ರಂದು ಹೊಳೆನರಸೀಪುರ ತಾಲೂಕಿನ ದೇವರಗುಡ್ಡೆನ ಹಳ್ಳಿಯಲ್ಲಿ ಯುವ ರೈತನೋರ್ವನಿಗೆ ವಿಷಪೂರಿತ ಹಾವು ಕಚ್ಚಿ ಮೃತಪಟ್ಟಿದ್ದ. ಆದರೆ ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಹಾವು ಕಚ್ಚಿ ಯುವಕ ಸಾವನ್ನಪಿದನಾ ಅಥವಾ ತೊಂದರೆ ಕೊಟ್ಟಿದ್ದರಿಂದ ಹಾವು ಸೇಡು ತೀರಿಸಿಕೊಂಡಿದೆಯಾ ಎಂಬ ಅನುಮಾನ ಹುಟ್ಟಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ಆ ಭಾಗದಲ್ಲಿ ಭಾರಿ ಸದ್ದು ಮಾಡುತ್ತಿದೆ.
ದೇವರಗುಡ್ಡೇನಹಳ್ಳಿ ಗ್ರಾಮದ ಅಭಿಲಾಷ್ ಎಂಬ ಯುವ ರೈತ ಹಾವು ಕಚ್ಚಿ ಸಾವಿಗೀಡಾಗಿದ್ದ. ಇದಕ್ಕೆ ಸ್ಥಳೀಯ ಶಾಸಕ ಮಾಜಿ ಸಚಿವ ರೇವಣ್ಣ ಕೂಡಾ ನೋವಿನ ಸಂಗತಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಆಗ್ರಹ ಮಾಡಿದ್ದರು. ಆದರೆ, ಹಾವು ಕಚ್ಚಿ ಸಾಯುವ 12 ದಿನ ಮುನ್ನ ಎಂದಿನಂತೆ ತನ್ನ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ, ನಾಗರಹಾವೊಂದು ಪೈಪ್ನಿಂದ ಹೊರಬಂದಿದೆ. ಅದನ್ನು ಕಂಡ ಅಭಿಲಾಷ್ ಅದಕ್ಕೆ ಸ್ವಲ್ಪ ಸಮಯ ಕೀಟಲೆ ಮಾಡಿದ್ದಾನೆ. ಪೈಪ್ನಿಂದ ಅದನ್ನು ಗಾಸಿಗೊಳಿಸಿದ್ದು, ಅದನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಕೂಡಾ ಮಾಡಿಕೊಂಡಿದ್ದ ಎನ್ನಲಾಗಿದೆ.
ಮೃತ ಪಟ್ಟ ಬಳಿಕ ಅಭಿಲಾಷ್ ಮನೆಗೆ ಬಂದ ಸ್ನೇಹಿತರು, ಆತನ ಮೊಬೈಲ್ ಪರಿಶೀಲನೆ ಮಾಡಿದಾಗ, ಹಾವಿಗೆ ಕೀಟಲೆ ಮಾಡುತ್ತಿರುವ ದೃಶ್ಯ ಕಂಡು ಬಂದಿದೆಯಂತೆ. ಪೈಪ್ನಿಂದ ಹಾವಿಗೆ ಕೀಟಲೆ ಮಾಡಲು ಮುಂದಾದಾಗ ನಾಗರಹಾವು ಹೆಡೆ ಎತ್ತಿರುವ ದೃಶ್ಯ ಕಂಡ ಸ್ನೇಹಿತರು ಗಾಬರಿಯಾಗಿದ್ದಾರೆ.