ಹಾಸನ:ಮದ್ಯದಂಗಡಿ ಪರವಾನಿಗೆ ವಿಚಾರವಾಗಿ ಬೇಲೂರು ಮತ್ತು ಅರಸೀಕೆರೆ ಶಾಸಕದ್ವಯರು ವೇದಿಕೆಯಲ್ಲಿಯೇ ಮಾತಿನ ಚಕಮಕಿ ಮೂಲಕ ಕಿತ್ತಾಡಿಕೊಂಡ ಘಟನೆ ಹಾಸನದ ಅರಸೀಕೆರೆಯಲ್ಲಿ ಸೋಮವಾರ ನಡೆದಿದೆ.
ಬೇಲೂರು ಶಾಸಕ ಎಚ್ ಕೆ ಸುರೇಶ್ ಮತ್ತು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಪರಸ್ಪರ ಕಿತ್ತಾಡಿಕೊಂಡ ಶಾಸಕರು. ಇವರಿಬ್ಬರ ಕಿತ್ತಾಟಕ್ಕೆ ವೇದಿಕೆಯಲ್ಲಿ ಕುಳಿತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಮೌನಕ್ಕೆ ಶರಣಾಗಿದ್ದರು.
ಕರಗುಂದ ಗ್ರಾಮದಲ್ಲಿ ಮದ್ಯದಂಗಡಿ ತೆರೆದು ಹೆಣ್ಣು ಮಕ್ಕಳ ತಾಳಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್ ಕೆ ಸುರೇಶ್ ಭಾಷಣದ ಮೂಲಕ ಆರೋಪ ಮಾಡಿದ್ದರು. ಇದಕ್ಕೆ ಉತ್ತರ ನೀಡಲು ಶಾಸಕ ಕೆ ಎಂ ಶಿವಲಿಂಗೇಗೌಡ ಮುಂದಾದರು. ಜನ ಸೇರಿಸುವವರು ನಾವು, ನೀವು 15 ಜನ ಕರೆದುಕೊಂಡು ಬಂದು ಸಭೆ ಹಾಳು ಮಾಡಲು ಬಂದಿದ್ದೀರಾ ಎಂದು ಶಾಸಕ ಸುರೇಶ್ ವಿರುದ್ಧ ಶಿವಲಿಂಗೇಗೌಡ ಕಿಡಿಕಾರಿದರು.
ಈ ವೇಳೆ ಸಿಟ್ಟಾದ ಸುರೇಶ್, ನನಗೂ ಜಾವಗಲ್ ಗ್ರಾಮ ಸೇರುತ್ತದೆ. ನನಗೂ ಈ ಗ್ರಾಮದ ಮೇಲೆ ಹಕ್ಕಿದೆ ಎಂದು ಹೇಳಿದರು. ಮದ್ಯದಂಗಡಿ ತೆರೆದಿರುವವರು ಶಿವಲಿಂಗೇಗೌಡರ ಸ್ನೇಹಿತ ಎಂದು ಮೈಕ್ ಹಿಡಿದು ಆರೋಪಿಸಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ನಮ್ಮ ಸರ್ಕಾರ ಬಂದು ಐದು ತಿಂಗಳು ಆಯ್ತು. ಒಂದು ಮದ್ಯದಂಗಡಿಗೂ ಅನುಮತಿ ನೀಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತೆರೆದಿದ್ದಾರೆ ಎಂದು ಸಿಟ್ಟಿನಿಂದ ಹೇಳಿದರು.