ಹಾಸನ: ''ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ಕೊಟ್ಟಿದ್ದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು. ಬಿಜೆಪಿ ಸರ್ಕಾರ ರದ್ದು ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆ ಮಾಡಿರುವುದಕ್ಕೆ ಸ್ವಾಗತಿಸುತ್ತೇವೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ'' ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ವಿಚಾರವಾಗಿ ಪ್ರತಿಕ್ರಿಯಿಸಿದರು. ''ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ದೇವೇಗೌಡರು ಬರೋವರೆಗೆ ಸಾಕಷ್ಟು ಜಾತಿಗಳಿಗೆ ಮೀಸಲಾತಿ ಇರಲಿಲ್ಲ. ಅವರು ಜನರಲ್ನಲ್ಲಿ ಹೋರಾಟ ಮಾಡಬೇಕಿತ್ತು. ಈ ವೇಳೆ, ದೇವೇಗೌಡರು ಬರಲಾಗಿ 108 ಜಾತಿಗಳಿಗೆ ಮೀಸಲಾತಿ ಸಿಕ್ಕಿತು. ಮೀಸಲಾತಿ ಇಲ್ಲದೇ ಇದ್ದಾಗ ಶೇ.4ರಷ್ಟು ಮುಸ್ಲಿಮರಿಗೆ ಶೇ. 18 ರಷ್ಟು ಹಿಂದುಳಿದವರಿಗೆ ಕೊಟ್ಟಿದ್ದು ದೇವೇಗೌಡರು. ಎಸ್ಟಿ ಸಮಾಜಕ್ಕೆ ಚಂದ್ರಶೇಖರ್ ಪಿಎಂ ಇರುವಾಗ ಹೋರಾಟ ಮಾಡಿಸಿದರು. ಮುಸ್ಲಿಮರು ಬಿಜೆಪಿಗೆ ಮತ ಕೊಡುವುದಿಲ್ಲ ಎಂದು ಮೀಸಲಾತಿ ರದ್ದು ಮಾಡಿದ್ರು. ಮೊದಲು ಬಿಜೆಪಿ ತೊಲಗಿಸಿ ಎಂದು ನಾನು ಮುಸ್ಲಿಮರಿಗೆ ಕೇಳಿಕೊಳ್ಳುತ್ತೇನೆ. ಬಿಜೆಪಿ ಕಾಂಗ್ರೆಸ್ ನಡುವೆ ಅಡ್ಜೆಸ್ಡಮೆಂಟ್ ಇದ್ದು, ಅದನ್ನು ಬಿಟ್ಟು ನೀವು ಜೆಡಿಎಸ್ಗೆ ಮತ ನೀಡಿ ಎಂದು ಮನವಿ ಮಾಡುತ್ತೇನೆ ಎಂದರು. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದು ಆದೇಶಕ್ಕೆ ತಡೆ ಮಾಡಿರುವುದಕ್ಕೆ ಸ್ವಾಗತಿಸುತ್ತೇವೆ'' ಎಂದು ಅವರು ಹೇಳಿದರು.
ಬಿಜೆಪಿ ನಾಯಕರ ವಿರುದ್ದ ರೇವಣ್ಣ ಗರಂ:''ಎಲ್ಲಾ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಗಾಂಧೀಜಿಯವರ ಆಸೆ ಈಡೇರಿಸಬೇಕು. ದೇವೇಗೌಡರು ಮೀಸಲಾತಿ ಇಲ್ಲದಿದ್ದಾಗ ಹಿಂದುಳಿದ ಜಾತಿಗೆ ಅವಕಾಶ ನೀಡಿದ್ರು. ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗೋದು ದೇವೇಗೌಡರ ಗುರಿಯಾಗಿತ್ತು. ಹಾಗಾಗಿ ದೇವೇಗೌಡರು 60ವರ್ಷಗಳ ಕಾಲ ರಾಜಕೀಯದ ಅನುಭವವಿದೆ. ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಇದ್ದು ಪ್ರಧಾನಿಯನ್ನು ಪ್ರಚಾರಕ್ಕೆ ಕರೆಸುವ ಸ್ಥಿತಿ ಇದೆ ಎಂದರೆ, ನಾನು ಏನು ಹೇಳಲಿ? ನಡ್ಡಾ ಬರಬೇಕು, ಮೋದಿ ಬರಬೇಕು. ಅಂದರೆ ಇವರ ಮುಖ ನೋಡಿದ್ರೆ ಯಾರೂ ಓಟ್ ಹಾಕಲ್ಲಾ ಅಂತಾಯ್ತಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ರೇವಣ್ಣ ಕಿಡಿಕಾರಿದರು.