ಹಾಸನ:ನಗರದ ಪ್ರಸಿದ್ಧ ಮಕ್ಕಳ ತಜ್ಞ ಡಾ. ರಾಜೀವ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅನಾರೋಗ್ಯಕ್ಕೆ ಈಡಾಗಿದ್ದ ರಾಜೀವ್‌ರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು.
ತಮ್ಮದೇ ಆದ ರಾಜೀವ್ ಆಸ್ಪತ್ರೆ ಹಾಗೂ ರಾಜೀವ್ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಜಿಲ್ಲೆಯವರೇ ಆದ ಅವರು ರಾಮನಾಥಪುರ ಹೋಬಳಿ ಬಸವಾಪಟ್ಟಣ ಸಮೀಪದ ಜಿಟ್ಟೆನಹಳ್ಳಿ ಗ್ರಾಮದ ವಿಷಕಂಠೇಗೌಡರ ಹಿರಿಯ ಮಗನಾಗಿದ್ದರು. ಪತ್ನಿ, ಮಕ್ಕಳು ಜೊತೆಗೆ ಇಬ್ಬರು ಸಹೋದರರು ಮತ್ತು ಒಬ್ಬರು ಸಹೋದರು ಹಾಗೂ ಅಪಾರ ಬಂಧು ವರ್ಗವನ್ನು ಅವರು ಅಗಲಿದ್ದಾರೆ.
ಮಾಜಿ ಪ್ರಧಾನಿ ಕಂಬನಿ:
ಡಾ.ರಾಜೀವ್ ಅವರ ಅಕಾಲಿಕ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ಕಂಬನಿ ಮಿಡಿದಿದ್ದಾರೆ. ವೈದ್ಯ ವೃತ್ತಿಯ ಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಅನೇಕ ಮಕ್ಕಳು ಉನ್ನತ ವ್ಯಾಸಂಗ ಪಡೆಯಲು ಆಧಾರಸ್ತಂಭವಾಗಿದ್ದರು. ಅವರು ನಮ್ಮ ನಡುವೆ ಇಲ್ಲ ಎಂಬುದು ವೈಯಕ್ತಿಕವಾಗಿ ಅತೀವ ನೋವು ತರಿಸಿದೆ. ಅವರ ಅಕಾಲಿಕ ನಿಧನ ನನ್ನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ
ಸಚಿವರ ಸಂತಾಪ:
ಖ್ಯಾತ ವೈದ್ಯ ಡಾ.ರಾಜೀವ್ ಅವರ ಅಕಾಲಿಕ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಡಾ. ರಾಜೀವ್ ಅವರ ನಿಧನದಿಂದ ಜಿಲ್ಲೆಗೆ ಬಹಳ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಸಚಿವರು ತಿಳಿಸಿದ್ದಾರೆ.