ಹಾಸನ:ಮೂರು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕುಗೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಭಾನುವಾರದಿಂದ-ಬುಧವಾರ ಸಂಜೆಯವರೆಗೂ ಬಿಡುವು ಕೊಟ್ಟು ಸಂಜೆಯಿಂದಲೇ ಮತ್ತೆ ಚುರುಕಾಗಿದ್ದು, ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಸಿದೆ.
ಮೂರು ದಿನ ಮಳೆ ಕಡಿಮೆಯಾಗಿದ್ದರಿಂದ ಜಲಾವೃತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಹಾಗಾಗಿ ರಸ್ತೆಗಳ ಸಂಪರ್ಕ ಮುಕ್ತವಾಗಿದ್ದವು. ನಿರಾಶ್ರಿತ ಪ್ರದೇಶದಲ್ಲಿದ್ದ ಜನರು ವರುಣನ ಅಬ್ಬರ ತಣ್ಣಗಾದ ತಕ್ಷಣ ಮನೆಗಳತ್ತ ಮುಖ ಮಾಡಿದ್ದರು. ಮಲೆನಾಡು ಮತ್ತು ಅರೆ ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿದು ಅವಾಂತರ ಸೃಷ್ಟಿಮಾಡಿದ ಮಳೆರಾಯ ಜನರಿಗೆ ನೆಮ್ಮದಿ ನೀಡದಂತೆ ಇಂದು ತನ್ನ ಆರ್ಭಟವನ್ನು ಶುರು ಮಾಡಿದ್ದಾನೆ.