ಅರಕಲಗೂಡು(ಹಾಸನ):ಕೊಣನೂರು ಅರಸೀಕಟ್ಟೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಯಾರೇ ಇಚ್ಛಿಸಿದಲ್ಲಿ ಅವರು ಇಲ್ಲಿಗೆ ನೀಡುವ ಕೊಡುಗೆಯ ಮೇಲೆ ಅವರ ಹೆಸರನ್ನು ಬರೆಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಆಸಕ್ತಿಯುಳ್ಳವರು ತಮ್ಮಿಷ್ಟದ ಸೌಕರ್ಯವನ್ನು ಇಲ್ಲಿ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬಹುದು ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಕೊಡುಗೆ ನೀಡುವವರ ಹೆಸರನ್ನು ಅದರ ಮೇಲೆ ಬರೆಸಲಾಗುವುದು: ಶಾಸಕ ಎ.ಟಿ.ರಾಮಸ್ವಾಮಿ ಅರಸೀಕಟ್ಟೆ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ನಕ್ಷತ್ರ ಉದ್ಯಾನ ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಇಲ್ಲಿ ವನರಾಶಿಯನ್ನು ಬೆಳೆಸುತ್ತಿದ್ದು, ಇಲ್ಲಿಗೆ ಹರಕೆ ತೀರಿಸಲು ಬರುವ ಭಕ್ತರ ಮಕ್ಕಳು ತಮ್ಮ ಬಿಡುವಿನ ಸಮಯವನ್ನು ಉಲ್ಲಾಸದಿಂದ ಕಳೆಯಲು ಅಲ್ಲಲ್ಲಿ ಆಟಿಕೆಗಳನ್ನು ನಿರ್ಮಿಸಲಾಗುತ್ತದೆ ಎಂದರು.
ಕೆರಯಂಚು ಮತ್ತು ಉದ್ಯಾನವನದ ಸುತ್ತಾ ಕಲ್ಲು ಬೆಂಚುಗಳನ್ನು ಹಾಕಲಾಗುತ್ತದೆ. ಈಗಾಗಲೇ ಇಲ್ಲಿನ ಎಡೆ ಪೀಠಕ್ಕೆ ನೆರಳು ನೀಡುವ ಗೋಪುರವನ್ನು ಭಕ್ತರೊಬ್ಬರು ತಮ್ಮ ಖರ್ಚಿನಲ್ಲಿ ನಿರ್ಮಿಸುತ್ತಿರುವುದನ್ನು ಈ ವೇಳೆ ಸ್ಮರಿಸಿದರು.
ವಿವಿಧ ವಿಶೇಷತೆಗಳಿಂದ ಕೂಡಿರುವ ನಕ್ಷತ್ರಾಕಾರದ ಉದ್ಯಾನವನ ನಿರ್ಮಾಣ ಸ್ಥಳಕ್ಕೆ ಶಾಸಕರು ಪ್ರತಿದಿನ ಭೇಟಿ ನೀಡಿ ಪರಿಶೀಲಿಸುತ್ತಿರುವ ಪರಿಣಾಮ ಉದ್ಯಾನ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆದಿದೆ.
ಇಲ್ಲಿನ ಕೆರೆಯ ಪಕ್ಕದಲ್ಲಿನ ಖಾಲಿ ಸ್ಥಳದಲ್ಲಿ ನಕ್ಷತ್ರಾಕರಾದಲ್ಲಿ ಮೈದಳೆಯುತ್ತಿರುವ ಉದ್ಯಾನದಲ್ಲಿ ನಿಖರವಾದ ಅಳತೆ ಮತ್ತು ನೇರದಲ್ಲಿ 27 ನಕ್ಷತ್ರಗಳನ್ನು ಪ್ರತಿನಿಧಿಸುವ 27 ಜಾತಿಯ ಗಿಡಗಳನ್ನು ನೆಟ್ಟಿದ್ದು, ಗಿಡಗಳನ್ನು ಸಂರಕ್ಷಿಸಲು ಕಟ್ಟೆ ಕಟ್ಟುವ ಕೆಲಸ, ನಕ್ಷತ್ರಾಕಾರದ ಸುತ್ತ ವಾಕಿಂಗ್ ಪಾತ್ ಮತ್ತು ಹಸಿರಿನ ಲಾನ್ ಬೆಳೆಸುವ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಕ್ಷತ್ರಾಕರಾದ ಮಧ್ಯದಲ್ಲಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ಕಟ್ಟಡ ನಿಮಾಣ ಪ್ರಾರಂಭಿಸಲಾಗುತ್ತಿದೆ.