ಅರಕಲಗೂಡು (ಹಾಸನ): ಕಳೆದ ವರ್ಷವಷ್ಟೇ ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದಿದ್ದ ತಾಲೂಕಿನ ಬಸವನಹಳ್ಲಿಯ ಕೊಪ್ಪಲು ಬಳಿ ಇರುವ ಮುರಿದ ಸೇತುವೆ ಕೊಲ್ಲಿ ಹಳ್ಳಕ್ಕೆ ಇಂದು ಇಟ್ಟಿಗೆ ಲಾರಿ ಉರುಳಿದೆ. ಘಟನೆಯಲ್ಲಿ ಚಾಲಕ ಮತ್ತು ನಾಲ್ವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊಳೆನರಸೀಪುರ- ಕೇರಳಾಪುರ ಕಡೆಯಿಂದ ಬಸವನಹಳ್ಳಿಗೆ ಇಟ್ಟಿಗೆಯನ್ನು ತುಂಬಿಕೊಂಡು ಬರುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಕೊಲ್ಲಿಗೆ ಪಲ್ಟಿಯಾಗಿದೆ. ಲಾರಿ ಉರುಳುತ್ತಿದ್ದಂತೆ ಒಳಗಿದ್ದ ಐವರು ಕೆಳಕ್ಕೆ ಜಿಗಿದು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
ಕೊಲ್ಲಿ ಹಳ್ಳಕ್ಕೆ ಬಿದ್ದ ಇಟ್ಟಿಗೆ ಲಾರಿ ಕಳೆದ ವರ್ಷ ಬಂದೆರಗಿದ ಭೀಕರ ಕಾವೇರಿ ಪ್ರವಾಹದ ವೇಳೆ ಮಳೆ ಹೊಡೆತಕ್ಕೆ ಸಿಕ್ಕಿ ಕೇರಳಾಪುರ-ಬಸವನಹಳ್ಳಿ ನಡುವಿನ ಕೊಲ್ಲಿ ಸೇತುವೆ ಮುರಿದು ಹಾಳಾಗಿತ್ತು. ಸೇತುವೆ ಬಿದ್ದು ತಿಂಗಳು ಕಳೆದರೂ ದುರಸ್ತಿಗೆ ಮುಂದಾಗಿರಲಿಲ್ಲ, ರಸ್ತೆಗೆ ಅಡ್ಡಲಾಗಿ ಮಣ್ಣು ಸಹ ಸುರಿದು ಅಡ್ಡಗಟ್ಟಿರಲಿಲ್ಲ. ಇದರ ಪರಿಣಾಮ ಹೋದ ವರ್ಷವೇ ಸಾಲಿಗ್ರಾಮದಿಂದ ಬಸವನಹಳ್ಳಿಗೆ ಪಿತೃ ಪಕ್ಷ ಹಬ್ಬದ ಊಟಕ್ಕೆ ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ಯುವಕರು ರಾತ್ರಿ ಸಮಯ ಮುರಿದ ಕೊಲ್ಲಿ ಸೇತುಗೆ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದರು.
ಕೊಲ್ಲಿ ಹಳ್ಳಕ್ಕೆ ಬಿದ್ದ ಇಟ್ಟಿಗೆ ಲಾರಿ ಈಗ ಕೊಲ್ಲಿ ಸೇತುವೆ ಹಾಳಾಗಿ ವರ್ಷ ಉರುಳಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುರಿದ ಸೇತುವೆ ದುರಸ್ತಿಗೆ ಮುಂದಾಗದ ಕಾರಣ ಹಳ್ಳಕ್ಕೆ ಲಾರಿ ಉರುಳಿದೆ. ನಿತ್ಯವೂ ನೂರಾರು ವಾಹನಗಳು, ಸಾರ್ವಜನಿಕರು ಓಡಾಡುವ ಮಾರ್ಗದ ದುರಸ್ತಿಗೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.