ಹಾಸನ: ವಯೋವೃದ್ಧೆಯೊಬ್ಬರನ್ನು ಕೊಲೆ ಮಾಡಿ ಬಳಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ 85 ವರ್ಷದ ವೃದ್ಧೆಯನ್ನು ವಿಕೃತ ಕಾಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಅತ್ಯಾಚಾರ ಎಸಗಿದ್ದಾನೆ. ಮಿಥುನ್ ಕುಮಾರ್ ಎಂಬಾತನೇ ಈ ಹೀನ ಕೃತ್ಯ ಎಸೆಗಿದ ಆರೋಪಿಯಾಗಿದ್ದು, ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಎಸ್ಪಿ ಹರಿರಾಂ ಶಂಕರ ಮಾಹಿತಿ:ಪ್ರಕರಣ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.ಏ.1ರ ಸಂಜೆ ವೃದ್ಧೆ ತಮ್ಮ ಜಮೀನು ನೋಡಲು ಹೋಗಿದ್ದರು. ಜಮೀನು ನೋಡಿಕೊಂಡು ವಾಪಸ್ ಆಗುವಾಗ ಬಂದ ದಾರಿ ಗೊತ್ತಾಗದೆ ಬೇರೊಂದು ರಸ್ತೆಗೆ ಹೋಗಿದ್ದಾರೆ. ಈ ವೇಳೆ, ಆರೋಪಿ ಮಿಥುನ್ ತಾಯಿ ವೃದ್ಧೆಗೆ ದಾರಿ ತೋರಿಸಿ ಬಿಟ್ಟು ಬರುವಂತೆ ತಿಳಿಸಿದ್ದಾರೆ. ಸ್ವಲ್ಪ ದೂರ ಸಾಗಿದ ನಂತರ ಆರೋಪಿ ಮಿಥುನ್ ವೃದ್ಧೆ ವಿರುದ್ಧ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ ಇದಕ್ಕೆ ವೃದ್ಧೆ ವಿರೋಧ ಪಡಿಸಿದ್ದಾರೆಂದು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಬಳಿಕ ಅತ್ಯಾಚಾರ ಎಸಗಿ ವಿಕೃತ ಮೆರೆದಿದ್ದಾನೆ.
ಮರುದಿನ ವೃದ್ಧೆಯ ಮೃತ ದೇಹ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ವೃದ್ಧೆಯನ್ನು ಕಾಡಾನೆ, ಇಲ್ಲವೇ ಯಾವುದು ಪ್ರಾಣಿ ದಾಳಿ ನಡೆಸಿ ಕೊಂದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಆದರೆ, ಅವರು ಧರಿಸಿದ್ದ ವಸ್ತ್ರಗಳು ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದರಿಂದ ತನಿಖೆ ಚುರುಕುಗೊಳಿಸಿದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ವೃದ್ಧೆ ಮೇಲೆ ಅತ್ಯಾಚಾರವಾಗಿರುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.