ಹಾಸನ:ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾದ ಕಾರಣ, ಶಾಲಾ-ಕಾಲೇಜುಗಳ ಆರಂಭಕ್ಕೆ ಜನವರಿಯಲ್ಲಿ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳ ಎದೆಯಲ್ಲಿ ಡವಡವ ಶುರುವಾಗಿದೆ. ಆದರೆ, ಅಷ್ಟರೊಳಗೆ ಪಠ್ಯ ಪೂರ್ಣಗೊಳಿಸುತ್ತೇವೆ ಎಂದು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ನಿರ್ದೇಶಕರು ಭರವಸೆ ಕೊಟ್ಟಿರುವುದು ವಿದ್ಯಾರ್ಥಿಗಳಲ್ಲಿ ಚೈತನ್ಯ ಮೂಡಿಸಿದೆ.
ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದು, ಇನ್ನುಳಿದ ಮೂರು ತಿಂಗಳಿನಲ್ಲಿ ಶೇ 70ರಷ್ಟು ಪಠ್ಯ ಪೂರ್ಣಗೊಳಿಸುವ ಕರ್ತವ್ಯ ಶಿಕ್ಷಕರದ್ದಾಗಿದೆ. ಶಿಕ್ಷಕರು ಪ್ರತಿನಿತ್ಯ ಒಂದರಿಂದ ಎರಡು ಗಂಟೆಕಾಲ ಹೆಚ್ಚುವರಿ ಪಾಠ-ಪ್ರವಚನ ಮಾಡುತ್ತಿದ್ದು, ಸರ್ಕಾರ ನಿಗದಿಪಡಿಸಿರುವ ಶೇ 70ರಷ್ಟು ಪಠ್ಯ ಪೂರ್ಣಗೊಳಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.
ಪಠ್ಯ ಪೂರ್ಣಗೊಳಿಸುವ ಕುರಿತು ಶಿಕ್ಷಕರು, ವಿದ್ಯಾರ್ಥಿಗಳ ಅಭಿಪ್ರಾಯ ಈ ವರ್ಷದ 10ನೇ ತರಗತಿಯ ಪರೀಕ್ಷೆ ಜೂನ್ 14ರಿಂದ ಪ್ರಾರಂಭವಾಗುತ್ತಿದೆ. ಹೀಗಾಗಿ, ಸರ್ಕಾರವೇ ಶೇ 30ರಷ್ಟು ಪಠ್ಯ ಕಡಿತಗೊಳಿಸಿದ್ದು, ನಾಲ್ಕು ತಿಂಗಳಲ್ಲಿ ಉಳಿದ ಶೇ 70ರಷ್ಟು ಪಠ್ಯ ಪೂರ್ಣಗೊಳಿಸಲು ಶಿಕ್ಷಕರಿಗೆ ಸೂಚಿಸಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮುಖ್ಯ ಶಿಕ್ಷಕರು ಸಭೆಗಳನ್ನು ನಡೆಸುವ ಮೂಲಕ ಅವರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ನಿತ್ಯ 10ಗಂಟೆಗೆ ಪ್ರಾರಂಭವಾಗುವ ಶಾಲೆಯನ್ನು ಒಂದು ಗಂಟೆ ಮುಂಚೆ ಪ್ರಾರಂಭಿಸಿ ಮತ್ತೆ ಸಂಜೆ ನಾಲ್ಕರ ಬದಲಿಗೆ ಐದು ಗಂಟೆಯ ತನಕ ಪಾಠ ಪ್ರವಚನ ಮಾಡಬೇಕಿದೆ. ಹಾಗೆಯೇ ವಾರದ ಎಲ್ಲಾ ದಿನಗಳಂತೆ ಶನಿವಾರವೂ ಬೆಳಗ್ಗೆಯಿಂದ ಸಂಜೆ ತನಕ ತರಗತಿಗಳನ್ನು ನಡೆಸಿದರೆ ಪಠ್ಯ ಪೂರ್ಣಗೊಳಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವುದು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮಾತು.
ಇದನ್ನೂ ಓದಿ...ಅನ್ನದಾತರಿಗೆ ಜಯವಾಗಲಿ ಎಂದು ಪ್ರತಿಭಟನಾ ನಿರತರ ಮನವೊಲಿಸಿದ ಹಾಸನ ಎಸ್ಪಿ
ಆನ್ಲೈನ್ ತರಗತಿಗಳಲ್ಲಿ ಪಾಠ ಮಾಡಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ಜೊತೆಗೆ ಕಷ್ಟದ ದಿನಗಳನ್ನು ಕೂಡ ಎದರಿಸಿದ್ದೇವೆ. ಸದ್ಯ ಕಾಲೇಜುಗಳು ಪ್ರಾರಂಭಗೊಂಡಿದ್ದು, ಮೊದಲಿದ್ದ ಕಾಲಾವಕಾಶಕ್ಕಿಂತ ಒಂದೆರಡು ಗಂಟೆಗಳ ಕಾಲ ಹೆಚ್ಚು ಕಾಲ ತರಗತಿ ನಡೆಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪಠ್ಯ ಪೂರ್ಣಗೊಳಿಸುವ ಭರವಸೆ ನಮಗಿದೆ. ವಿದ್ಯಾರ್ಥಿಗಳು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನುತ್ತಾರೆ ಉಪನ್ಯಾಸಕರು.
ಮೊದಲು ನಮಗೆ ಕನಿಷ್ಠ 10 ತಿಂಗಳು ಪಾಠ ಪ್ರವಚನ ನಡೆಯುತ್ತಿತ್ತು. ಈಗ ಅದರ ಅರ್ಧ ಭಾಗದಷ್ಟು ಸಮಯ ಇರುವುದರಿಂದ ಓದುವ ಒತ್ತಡ ಹೆಚ್ಚಾಗುತ್ತಿದೆ. ಶಿಕ್ಷಕರು ನೀಡುತ್ತಿರುವ ಧೈರ್ಯದಿಂದ ಸ್ವಲ್ಪ ಮಟ್ಟಿಗೆ ನಾವು ಹೆಚ್ಚು ಶ್ರಮ ಹಾಕುತ್ತಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.