ಹಾಸನ: ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಕಲೇಶಪುರ ತಾಲೂಕಿನ ಯಸಳೂರು ಸಮೀಪದ ತಂಬಲಗೆರೆ ಗ್ರಾಮದ ಅನಿಲ್(28) ಮತ್ತು ನಾಗರಾಜ್ (64)ಬಂಧಿತ ಆರೋಪಿಗಳು. ಜ.9ರಂದು ರಾತ್ರಿ ನವೀನ್ ಮತ್ತು ಸ್ನೇಹಿತರು ಕೆರೆಯ ದಡದಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಹಳೆಯ ದ್ವೇಷವಿದ್ದ ನಾಗರಾಜ್ ಮತ್ತು ಅನಿಲ್ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ ಹಿನ್ನೆಲೆ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ನೇಹಿತರಾದ ದಯಾನಂದ ಮತ್ತು ಪದ್ಮನಾಭ ಅವರಿಗೆ ಗಂಭೀರ ಗಾಯಗಳಾಗಿದ್ದವು. ಅವರೀಗ ಪ್ರಸ್ತುತ ಸಕಲೇಶಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೂಟ್ ಔಟ್ ಪ್ರಕರಣ ಏನು?:ಬಿಜೆಪಿಯ ಸಕ್ರಿಯ ಕಾರ್ಯಕರ್ತ ಮತ್ತು ಸ್ವಯಂಸೇವಾ ಸಂಘದಲ್ಲಿ ಗುರುತಿಸಿಕೊಂಡಿದ್ದ ಮೃತಪಟ್ಟ ನವೀನ್, ಅಕ್ರಮವಾಗಿ ಮರಳು ದಂಧೆ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಪೊಲೀಸರಿಗೆ ಆರೋಪಿ ನಾಗರಾಜ್ ಮಾಹಿತಿ ನೀಡಿದ್ದರು. ಇದರಿಂದಾಗಿ ಮೃತ ನವಿನ್ ಅವರು ನಾಗರಾಜ್ಗೆ ಬೆದರಿಕೆ ಜತೆಗೆ ಕೊಲೆ ಮಾಡುವುದಾಗಿ ಬೆದರಿಸಿದ್ದರು.
ಇದರಿಂದಾಗಿ ಕೋಪಗೊಂಡ ನಾಗರಾಜ್ ಅವರು ನವೀನ್ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ನವೀನ್ ಮತ್ತು ಆತನ ಸ್ನೇಹಿತರು ಕೆರೆಯ ದಡದಲ್ಲಿ ಪಾರ್ಟಿ ಮಾಡುವ ವೇಳೆ ಆರೋಪಿ ನಾಗರಾಜ್ ಮತ್ತು ಅನಿಲ್ ಲೈಸೆನ್ಸ್ ಪಡೆದಿದ್ದ ಬಂದೂಕಿನಿಂದ ಗುಂಡು ಹಾರಿಸಿ ನವೀನನ್ನು ಕೊಲೆಗೆ ಯತ್ನಿಸಿದ್ದನು. ಇನ್ನು ಪ್ರಕರಣಕ್ಕೆ ಪರೋಕ್ಷವಾಗಿ ಪೊಲೀಸರು ಕಾರಣ ಎಂಬ ಆರೋಪಗಳಿವೆ. ಅಕ್ರಮ ಮರಳುಗಾಡಿಕೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಗೌಪ್ಯ ಮಾಹಿತಿ ನೀಡಿದರೆ, ಆ ಮಾಹಿತಿ ಅಕ್ರಮ ಮರಳುಗಾರಿಕೆ ಮಾಡುವವರ ಗಮನಕ್ಕೆ ಬರುತ್ತದೆ. ಹಾಗಾದರೆ ಈ ಮಾಹಿತಿ ಅವರಿಗೆ ತಲುಪುವುದಾದರೂ ಹೇಗೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ
ನಾಲ್ವರು ಸ್ನೇಹಿತರು ಕೂಡಿ ಪಾರ್ಟಿ:ಮೀನು ಹಿಡಿಯಲು ಹೋಗಿದ್ದ ವೇಳೆ ಗುಂಡಿನ ದಾಳಿಗೆ ಹಾಸನ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿಯ ನವೀನ್ ಅಲಿಯಾಸ್ ಪಚ್ಚಿ (39) ಗುಂಡಿಗೆ ಬಲಿಯಾಗಿದ್ದರು. ನವೀನ್ ನಾಲ್ವರು ಸ್ನೇಹಿತರ ಜೊತೆಗೂಡಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಇದೇ ವೇಳೆ, ಅಪರಿಚಿತರು ಹಾರಿಸಿದ ಗುಂಡಿಗೆ ನವೀನ್ ಬಲಿಯಾಗಿದ್ದರು. ನವೀನ್ ಸ್ನೇಹಿತ ದಯಾನಂದ ಹಾಗೂ ಪದ್ಮನಾಭ ಎಂಬುವರಿಗೂ ಗುಂಡು ತಗುಲಿ ಗಾಯಗೊಂಡಿದ್ದರು. ಮತ್ತೊಬ್ಬ ಯುವಕ ರಾಜಾಚಾರಿ ಯಾವುದೇ ಅಪಾಯ ಸಂಭವಿಸದೇ ಪ್ರಾಣಾಪಾಯದಿಂದ ಪಾರಾಗಿದ್ದರು.