ಹಾಸನ: ನೀನು ಹೇಳಿದ ಹಾಗೆ ಕೇಳಿಕೊಂಡು ನಾನು ಎಂಎಲ್ಎ ಗಿರಿ ಮಾಡುವುದಕ್ಕೆ ಆಗೋದಿಲ್ಲ. ಆ ಹಳೆ ಕಾಲ ಹೋಯ್ತು. ನಿನ್ನ ಕ್ಷೇತ್ರ ನೀನು ನೋಡ್ಕೋ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ವಾಗ್ದಾಳಿ ನಡೆಸಿದರು.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಬ್ಬರು ಶಾಸಕರು ಪರಸ್ಪರ ಏಕವಚನದಲ್ಲಿಯೇ ವಾಕ್ಸಮರ ನಡೆಸಿಕೊಂಡರು. ಚನ್ನಪಟ್ಟಣದ ಕೆರೆಗೆ ಬಿಡುಗಡೆಯಾಗಿದ್ದ 144 ಕೋಟಿ ರೂ ವಿಚಾರವಾಗಿ ನಡೆದ ಪ್ರಸ್ತಾಪ ಗದ್ದಲಕ್ಕೆ ಕಾರಣವಾಯಿತು. ಇದನ್ನು ಗಮನಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗು ಸಭೆಯಲ್ಲಿದ್ದ ಇಲಾಖೆಯ ಅಧಿಕಾರಿ ವರ್ಗ ಮೂಕ ಪ್ರೇಕ್ಷಕರಂತೆ ಕುಳಿತು ಆಲಿಸಿದರು.
ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆ ಶಾಸಕ ಪ್ರೀತಂ ಗೌಡ ಮಾತಿಗೆ ಸಿಟ್ಟಿಗೆದ್ದ ರೇವಣ್ಣ, "ನಮ್ಮ ಸರ್ಕಾರದ ಅವಧಿಯಲ್ಲಿ ತರಲಾದ 144 ಕೋಟಿ ರೂ.ಗಳ ಅನುದಾನವನ್ನು ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಈಗ ಆ ಯೋಜನೆಯ ಹಣವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಬಳಸಲಾಗಿದೆ. ಆದರೆ, ಆ ಕಾಮಗಾರಿಯೂ ಕೂಡ ಸರಿಯಾದ ರೀತಿ ಆಗುತ್ತಿಲ್ಲ. ಈ ಕುರಿತು ತನಿಖೆಯಾಗಲಿ" ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಪ್ರೀತಂ ಗೌಡ, "ಯಾವ ತನಿಖೆ ಬೇಕಾದ್ರೂ ಮಾಡಿಸಲಿ, ನಾನು ಹೆದರಲ್ಲ. ಕ್ಯಾಬಿನೆಟ್ ನಿರ್ಧಾರವನ್ನು ಇಲ್ಲಿ ಚರ್ಚೆ ಮಾಡುವುದಾದರೆ ಕ್ಯಾಬಿನೆಟ್ ಅನ್ನು ಕೆಡಿಪಿ ಮಟ್ಟಕ್ಕೆ ಇಳಿಸಬೇಡಿ" ಎಂದು ರೇವಣ್ಣ ಆರೋಪಕ್ಕೆ ಸ್ಥಳದಲ್ಲೇ ತಿರುಗೇಟು ನೀಡಿದರು.
ಇದನ್ನೂ ಓದಿ:ಸಂಸದರಾದರೆ ಸಾಲದು ಸಂಸ್ಕಾರ ಇರಬೇಕು: ಪ್ರಜ್ವಲ್ ರೇವಣ್ಣಗೆ ಪ್ರೀತಂ ಗೌಡ ತಿರುಗೇಟು
ಮಧ್ಯಪ್ರವೇಶಿಸಿದ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿರುದ್ಧವು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ನೀರಾವರಿಯಲ್ಲಿ ಅನುದಾನ ಕೊಡಿಸುತ್ತೇನೆ ಎಂದಿದ್ರಿ ಎಂಬ ರೇವಣ್ಣನವರ ಮಾತಿಗೆ ಪ್ರೀತಂ ಗೌಡ ಮಧ್ಯಪ್ರವೇಶಿಸಿ, ಹಳೇಬೀಡು ಕೆರೆಗೆ ಅನುದಾನ ಕೊಟ್ಟಿಲ್ವಾ? ಎಂದರು. ಸಚಿವರ ಜೊತೆ ಮಾತನಾಡುವಾಗ ಮಧ್ಯಪ್ರವೇಶಿಸುವುದಕ್ಕೆ ನಿಮಗೆ ನಾಚಿಕೆ ಆಗಬೇಕು ಎಂದು ರೇವಣ್ಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂ ಗೌಡ, ನಾಚಿಕೆ ಯಾರಿಗೆ ಆಗಬೇಕು, ಅವರಿಗೆ ಆಗಲಿ ಎಂದು ಗುಡುಗಿದರು.
ಪ್ರೀತಂ ಗೌಡ ವಿರುದ್ಧ ಕೆಂಡಾಮಂಡಲವಾದ ರೇವಣ್ಣ, ಹಳೇಬೀಡಿನ ಕೆರೆಗೆ ಕುಮಾರಸ್ವಾಮಿ ಅನುದಾನ ನೀಡಿದ್ದು ಎಂದರು. ಇದಕ್ಕೆ ಉತ್ತರಿಸಿದ ಶಾಸಕ, ನೀವು ಬಜೆಟ್ನಲ್ಲಿ ಅನೌನ್ಸ್ ಮಾಡಿ ಮನೆಗೆ ಹೋಗುವುದಲ್ಲ, ಕೆಲಸ ಮಾಡಿಸಬೇಕು ಎಂದು ಟಾಂಗ್ ಕೊಟ್ಟರು. ಜೊತೆಗೆ ಜಲಜೀವನ್ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರು. ಆದರೆ ನಾನೇ ಮಾಡಿದ್ದೇನೆ ಎನ್ನುತ್ತಿದ್ದೀಯಾ. ಯಡಿಯೂರಪ್ಪ ಸರ್ಕಾರದಿಂದಲೇ ಹಾಸನದ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿದ್ದು, ಹಾಸನ ನಗರದ ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೂಲ ಸೌಕರ್ಯಗಳಿಗೆ ಯಡಿಯೂರಪ್ಪ ಅವರೇ ಬರಬೇಕಾಯಿತು. ಇಲ್ಲಿ ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವೆ.. ಪ್ರೀತಂ ಗೌಡಗೆ ಹೆಚ್ ಡಿ ರೇವಣ್ಣ ಪ್ರತಿ ಸವಾಲು
ಈ ಸಂದರ್ಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ, ನೀವು ಯಾವ ವಿಚಾರ ಪ್ರಸ್ತಾಪ ಮಾಡುತ್ತಿದ್ದೀರಿ, ನಿಮಗೆ ಏನಾಗಬೇಕು? ಎನ್ನುವ ಮೂಲಕ ಸಭೆಯಲ್ಲಿದ್ದ ಸಂಘರ್ಷದ ವಾತಾವರಣವನ್ನು ನಗೆ ಗಡಲಿನಲ್ಲಿ ತೇಲಿಸುವ ಮೂಲಕ ಇಬ್ಬರ ನಡುವಿನ ವಾಗ್ವಾದಕ್ಕೆ ಅಂತ್ಯ ಹಾಡಿದರು. ಶಾಸಕರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್.ಲಿಂಗೇಶ್, ಹೆಚ್.ಕೆ. ಕುಮಾರಸ್ವಾಮಿ ಉಪಸ್ಥಿತರಿದ್ದರು.