ಕರ್ನಾಟಕ

karnataka

ETV Bharat / state

5 ವರ್ಷ ಶಾಸಕರು ಹೇಳಿದಂತೆ ಕೇಳುತ್ತೇವೆ: ಶಿವಲಿಂಗೇಗೌಡ ಸಮ್ಮುಖದಲ್ಲಿ ಗ್ರಾ.ಪಂ ಸದಸ್ಯರಿಂದ ಆಣೆ -ಪ್ರಮಾಣ - ಶಾಸಕ ಶಿವಲಿಂಗೇಗೌಡ ಲೇಟೆಸ್ಟ್ ನ್ಯೂಸ್

ಶಾಸಕ ಕೆ.ಎಂ ಶಿವಲಿಂಗೇಗೌಡ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅರಸೀಕೆರೆ ನಗರದ ಹೊರಭಾಗದಲ್ಲಿರುವ ಜೇನುಕಲ್ಲು ಸಿದ್ದೇಶ್ವರ ಬೆಟ್ಟಕ್ಕೆ ಕರೆಸಿಕೊಂಡು ಆಣೆ - ಪ್ರಮಾಣ ಮಾಡಿಸಿಕೊಂಡಿದ್ದಾರೆ.

Swearing-in by Gram Panchayat members
ಶಿವಲಿಂಗೇಗೌಡ ಸಮ್ಮುಖದಲ್ಲಿ ಗ್ರಾ.ಪಂ ಸದಸ್ಯರಿಂದ ಆಣೆ-ಪ್ರಮಾಣ

By

Published : Jan 6, 2021, 6:44 AM IST

ಹಾಸನ:ಜೇನುಕಲ್ಲು ಸಿದ್ದೇಶ್ವರ ಪಾದುಕೆ ಆಣೆಗೂ ನಾವು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗೋದಿಲ್ಲ ನೀವು ಹೇಳಿದಾಗೆ ಕೇಳ್ತೀವಿ ಎಂದು ಪ್ರಮಾಣ ಮಾಡಿಸಿ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಬೆಂಬಲಿತ ಸದಸ್ಯರುಗಳನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್​​ ಶಾಸಕರು ಯತ್ನಿಸಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯಾದಾಪುರ ಬೆಟ್ಟದ ಮೇಲಿರುವ ಜೇನುಕಲ್ಲು ಸಿದ್ದೇಶ್ವರ ಸನ್ನಿಧಿ ಇಂತಹದೊಂದು ಘಟನೆಗೆ ಸಾಕ್ಷಿಯಾಗಿತ್ತು. ಶೇಕಡಾ 80ಕ್ಕೂ ಅಧಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದು, ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ಮುಖಂಡರುಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕರೆ ಮಾಡಿ ಮೀಸಲಾತಿಯನ್ನು ನಿಮ್ಮ ಪರವಾಗಿಯೇ ಮಾಡಿಸಿಕೊಳ್ಳುತ್ತೇವೆ ಎಂದು ಆಮಿಷವೊಡ್ಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.

ಶಿವಲಿಂಗೇಗೌಡ ಸಮ್ಮುಖದಲ್ಲಿ ಗ್ರಾ.ಪಂ ಸದಸ್ಯರಿಂದ ಆಣೆ-ಪ್ರಮಾಣ

ಈ ಹಿನ್ನೆಲೆಯಲ್ಲಿ ಭಯಗೊಂಡಿರುವ ಶಾಸಕ ಕೆ.ಎಂ ಶಿವಲಿಂಗೇಗೌಡ, ಗೆಲುವು ಸಾಧಿಸಿರುವ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅರಸೀಕೆರೆ ನಗರದ ಹೊರಭಾಗದಲ್ಲಿರುವ ಜೇನುಕಲ್ಲು ಸಿದ್ದೇಶ್ವರ ಬೆಟ್ಟಕ್ಕೆ ಕರೆಸಿಕೊಂಡು ಆಣೆ - ಪ್ರಮಾಣ ಮಾಡಿಸಿಕೊಂಡಿದ್ದಾರೆ. ಸಿದ್ದೇಶ್ವರ ಪಾದುಕೆಯ ಬಳಿ ಹೋಮಕುಂಡಕ್ಕೆ ಕರ್ಪೂರ ಹಾಕುವ ಮೂಲಕ ಐದು ವರ್ಷಗಳ ಕಾಲ ನಮಗೆ ಶಾಸಕರು ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೇ ಮಾಡಿಕೊಂಡು ಹೋಗ್ತೇವೆ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಸಿದ್ದೇಶ್ವರನ ಆಣೆ ಎಂಬ ಮಾತನ್ನು ಅಭ್ಯರ್ಥಿಗಳಿಂದ ಹೇಳಿಸುವ ಮೂಲಕ ಕುಂಡಕ್ಕೆ ಕರ್ಪೂರ ಹಾಕಿ ಪಕ್ಷಕ್ಕೆ ದ್ರೋಹ ಬಗೆಯದಂತೆ ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿದ್ದಾರೆ.

ಆಣೆ ಪ್ರಮಾಣ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಡಳಿತ ಪಕ್ಷ ಸೇರಿದಂತೆ ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಎಂದರೆ ಅದೊಂದು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುವಂತದ್ದು, ತಮ್ಮ ಗ್ರಾಮವನ್ನು ಅವರುಗಳೇ ಸ್ವತಃ ಅಭಿವೃದ್ಧಿಪಡಿಸಬೇಕು, ಪಕ್ಷಬೇಧ ಮರೆತು ಕೆಲಸ ಮಾಡಿಕೊಂಡು ಹೋಗಬೇಕಾದ ಅವರನ್ನು ಪಕ್ಷದ ಹೆಸರಲ್ಲಿ ಮತ್ತು ದೇವರ ಹೆಸರಲ್ಲಿ ಆಣೆ - ಪ್ರಮಾಣ ಮಾಡಿಸಿ ಮೂಢನಂಬಿಕೆಯ ಪರಮಾವಧಿಯನ್ನು ಸ್ಥಾಪಿಸುತ್ತಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುವುದು ಕೆಲವರ ಮಾತಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಚುನಾವಣೆಯಲ್ಲಿ ಗೆದ್ದ ನಾಯಕರುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದನ್ನು ಕೂಡ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ABOUT THE AUTHOR

...view details