ಕರ್ನಾಟಕ

karnataka

ETV Bharat / state

ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್​: ಭವಾನಿ ರೇವಣ್ಣ ಭಿನ್ನಮತದ ನಡುವೆ ಗೆದ್ದು ಬೀಗುತ್ತಾರಾ ಸ್ವರೂಪ್?

ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ನಿನ್ನೆ ಬಿಡುಗಡೆ ಮಾಡಲಾಗಿದೆ. ಅದರಲ್ಲೂ ಬಹು ನಿರೀಕ್ಷಿತ ಹಾಸನ ಕ್ಷೇತ್ರದ ಟಿಕೆಟ್ ಹೆಚ್ ಪಿ ಸ್ವರೂಪ್​ಗೆ ನೀಡಲಾಗಿದ್ದು, ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದೆ.

swaroop
ಹೆಚ್ ಪಿ ಸ್ವರೂಪ್​

By

Published : Apr 15, 2023, 6:48 AM IST

ಹಾಸನ: 81 ದಿನಗಳ ಕಾಲ ನಿರಂತರವಾಗಿ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ಕೊನೆಗೂ ಬಹಿರಂಗವಾಗಿದೆ. ಕುಟುಂಬಸ್ಥರ ನಡುವಿನ ಹಗ್ಗ ಜಗ್ಗಾಟದ ನಡುವೆಯೂ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಹೆಚ್​ ಡಿ ಕುಮಾರಸ್ವಾಮಿ ಟಿಕೆಟ್ ನೀಡುವ ಮೂಲಕ ಶಾಕ್ ನೀಡಿದ್ದಾರೆ.

ತಂದೆ ಭಾವಚಿತ್ರಕ್ಕೆ ಪೂಜೆ ಮಾಡಿದ ಹೆಚ್ ಪಿ ಸ್ವರೂಪ್​

ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗುತ್ತಾರೆ? ಅಂತ ಇಡೀ ರಾಜ್ಯವೇ ಎದುರು ನೋಡುತ್ತಿತ್ತು. ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಎರಡನೇ ಪಟ್ಟಿ ಬಿಡುಗಡೆ ಮಾಡದಿದ್ದರೂ ಉಮೇದುವಾರಿಕೆ ಪತ್ರವನ್ನು ನೀಡಿರುವುದು ಕುತೂಹಲ ಮೂಡಿಸಿದೆ. ಕುಟುಂಬದ ಆಂತರಿಕ ಕಲಹದ ನಡುವೆ ಪಕ್ಷವನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್​ ಡಿ ರೇವಣ್ಣನ ಪತ್ನಿ ಭವಾನಿ ರೇವಣ್ಣನಿಗೆ ಟಿಕೆಟ್ ನೀಡದೇ ಹಾಸನದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್​ ನೀಡುವ ಮೂಲಕ ಪಕ್ಷವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಕುಣಿದು ಕುಪ್ಪಳಿಸಿದ ಕಾರ್ಯಕರ್ತರು: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ. ಎಚ್ಎಸ್ ಪ್ರಕಾಶ್ ಅವರ ಪುತ್ರ ಸ್ವರೂಪ್​ಗೆ ಟಿಕೆಟ್​ ದೊರಕಿದ್ದು, 81 ದಿನಗಳಿಂದ ಕಾದು ಕುಳಿತಿದ್ದ ಕಾರ್ಯಕರ್ತರ ಮುಖದಲ್ಲಿ ಸಂತಸ ಮೂಡಿದೆ. ಉಮೇದುವಾರಿಕೆ ಪತ್ರವನ್ನು ಸ್ವರೂಪ್​ಗೆ ನೀಡುವ ಮೂಲಕ ಭವಾನಿ ರೇವಣ್ಣನ ಬ್ಲಾಕ್​ಮೇಲ್ ತಂತ್ರಗಾರಿಕೆಗೆ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ. ಇನ್ನು ಬಿ ಫಾರ್ಮ್ ಸಿಕ್ಕ ಹಿನ್ನೆಲೆಯಲ್ಲಿ ಸ್ವರೂಪ ಮನೆಯಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಈ ಬಗ್ಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸ್ವರೂಪ್, "ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇತ್ತು. ಅದರಂತೆ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಹೆಚ್ ಡಿ ಕುಮಾರಸ್ವಾಮಿ ಅವರು ಟಿಕೆಟ್ ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ನಮ್ಮ ತಂದೆ ಮೂರು ಬಾರಿ ಶಾಸಕರಾಗಿದ್ದವರು. ಹಾಸನದಲ್ಲಿ ಪಕ್ಷವನ್ನ ಕಟ್ಟುವಲ್ಲಿ ತಮ್ಮದೇ ಪಾತ್ರ ವಹಿಸಿದ್ದರು. ಅವರ ಮಾರ್ಗದರ್ಶನ ಮತ್ತು ತತ್ವ ಸಿದ್ಧಾಂತಗಳ ಮೂಲಕವೇ ನಾನು ನನ್ನ ಕಾರ್ಯಕರ್ತರನ್ನ ಮತ್ತು ಕ್ಷೇತ್ರವನ್ನು ಬಳಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಅಷ್ಟೇ ಅಲ್ಲದೇ, ಟಿಕೆಟ್ ದೊರೆಯಲು ಕಾರಣಕರ್ತರಾದ ಕುಮಾರಸ್ವಾಮಿ, ದೇವೇಗೌಡರು, ರೇವಣ್ಣ ಹಾಗೂ ಭವಾನಿ ರೇವಣ್ಣನವರಿಗೂ ನಾನು ಧನ್ಯವಾದ ಹೇಳುತ್ತೇನೆ" ಎಂದರು.

ಒಗಟ್ಟಾಗಿ ಪಕ್ಷ ಸಂಘಟನೆ: "ನಾನು ಒಬ್ಬನೇ ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ. ರೇವಣ್ಣನ ಕುಟುಂಬ ಹಾಗೂ ಭವಾನಿ ಅಕ್ಕನವರ ಮಾರ್ಗದರ್ಶನದಲ್ಲಿಯೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಎದುರಿಸುತ್ತೇನೆ. ಈ ಬಾರಿಯ ಚುನಾವಣೆ ನಮ್ಮ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ. ಶತಾಯಗತಾಯ ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕಾಗಿರುವುದರಿಂದ ಎಲ್ಲರನ್ನೂ ಒಗ್ಗೂಡಿಸಿ ಚುನಾವಣೆ ಎದುರಿಸುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ :ಜೆಡಿಎಸ್​​ 2ನೇ ಪಟ್ಟಿ: ಹಾಸನದಲ್ಲಿ ಭವಾನಿ ಬದಲು ಸ್ವರೂಪ್​, ಕಡೂರಲ್ಲಿ ದತ್ತಗೆ ಟಿಕೆಟ್​

ಕಾರ್ಯಕರ್ತರ ಮನಸ್ಸು ಗೆದ್ದಿರುವ ಸ್ವರೂಪ್ : ಕುಮಾರಸ್ವಾಮಿ ಅವರು ಪಕ್ಷ ಸಂಘಟನೆ ದೃಷ್ಟಿಕೋನದಲ್ಲಿ ಸಾಮಾನ್ಯ ಕಾರ್ಯಕರ್ತ ಎನಿಸಿಕೊಂಡು ಸ್ವರೂಪ್​ಗೆ ಟಿಕೆಟ್ ನೀಡಿದ್ದಾರೆ. ಒಂದು ದೃಷ್ಟಿಕೋನದಲ್ಲಿ ನೋಡುವುದಾದರೆ, ಟಿಕೆಟ್ ಪಡೆಯುವ ಮೂಲಕ ಕಾರ್ಯಕರ್ತರ ಮನಸ್ಸಿನಲ್ಲಿ ಗೆದ್ದಿರುವ ಸ್ವರೂಪ್, ರೇವಣ್ಣನ ಕುಟುಂಬದಲ್ಲಿ ಸೋಲನ್ನ ಕಾಣಬಹುದು. ಯಾಕಂದ್ರೆ, ದಿವಂಗತ ಪ್ರಕಾಶ್ ಅಭಿಮಾನಿಗಳು ಏರ್ಪಡಿಸಿದ್ದ ಬೃಹತ್ ಸಮಾವೇಶಕ್ಕೂ ನಾನಾ ಕಾರಣ ನೀಡುವ ಮೂಲಕ ರೇವಣ್ಣ ಕುಟುಂಬ ಸಭೆಗೆ ಹಾಜರಾಗದೇ ದೂರ ಇತ್ತು.

ಅದೇ ಸಮಾರಂಭಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಹೆಚ್ ಡಿ ಕುಮಾರಸ್ವಾಮಿ ಆಗಮಿಸಿ, ನಿಮ್ಮ ಕೈ ಬಿಡುವುದಿಲ್ಲ ಅಂತ ಪ್ರಕಾಶ್ ಪತ್ನಿಗೆ ಭರವಸೆ ನೀಡಿದ್ದರು. ಅದೇ ರೀತಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಆದರೆ, ನಾನಾ ರೀತಿಯ ತಂತ್ರಗಾರಿಕೆ ಮಾಡಿ ಟಿಕೆಟ್ ಪಡೆಯಲು ಪ್ರಯತ್ನಪಟ್ಟಿದ್ದ ಭವಾನಿ ರೇವಣ್ಣನಿಗೆ ಮಾತ್ರ ಟಿಕೆಟ್ ಕೈತಪ್ಪಿದ್ದು, ಸ್ವರೂಪ್ ಕುಟುಂಬದ ಮೇಲೆ ಮತ್ತಷ್ಟು ದ್ವೇಷ ಬೆಳೆಯುವಂತೆ ಮಾಡಿದೆ ಎನ್ನಲಾಗಿದೆ. ಹೀಗಾಗಿ, ಸ್ವರೂಪ್ ಚುನಾವಣಾ ಪ್ರಚಾರಕ್ಕಾಗಿ ಅಥವಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭವಾನಿ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಕುಟುಂಬ ಸಾಥ್​ ನೀಡುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಒಟ್ಟಾರೆ ಹಾಸನದ ವಿಧಾನಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿರುವ ಬಿಜೆಪಿಯ ಪ್ರೀತಂ ಗೌಡ ಹಾಗೂ ಜೆಡಿಎಸ್ ನ ಸಾಮಾನ್ಯ ಕಾರ್ಯಕರ್ತ ಸ್ವರೂಪ ನಡುವೆ ಬಿಗ್ ಫೈಟ್ ನಡೆಯಲಿದ್ದು ಯಾರು ಕ್ಷೇತ್ರದ ಅಧಿಪತಿಯಾಗುತ್ತಾರೆ ಎಂಬುದು ಮೇ 13ರಂದು ಗೊತ್ತಾಗಲಿದೆ.

ABOUT THE AUTHOR

...view details