ಸಕಲೇಶಪುರ :ವೃದ್ಧೆಯೋರ್ವಳಿಗೆ ಕೊರೊನಾ ವೈರಸ್ ತಗುಲಿರುವ ಅನುಮಾನ ವ್ಯಕ್ತವಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಬೆಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಗಲಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.
ವೃದ್ಧೆಗೆ ಸೋಂಕು ತಗುಲಿರುವ ಕುರಿತು ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ವೃದ್ಧೆಗೆ ಯಾವುದೇ ಚಲನವಲನ ಇರದಿರುವುದು ತಾಲೂಕು ಆಡಳಿತಕ್ಕೆ ಆತಂಕ ತಂದಿದೆ. ವಿಪರೀತ ಕೆಮ್ಮಿನಿಂದ ಬಳಲುತ್ತಿದ್ದ ವೃದ್ಧೆ ಬಾಳ್ಳುಪೇಟೆಯ ಖಾಸಗಿ ಕ್ಲಿನಿಕ್‌ವೊಂದರಲ್ಲಿ ಕಳೆದ ವಾರ ಚಿಕಿತ್ಸೆ ಪಡೆದಿದ್ದರು.
ಗುಣಮುಖವಾಗದ ಹಿನ್ನೆಲೆ ಶನಿವಾರ ಪಟ್ಟಣದ ಖಾಸಗಿ ಆಸ್ಪತ್ರೆಯೊಂದಕ್ಕೆ ವೃದ್ಧೆ ದಾಖಲಾಗಲು ಬಂದಿದ್ದರು. ಅಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕ್ರಾರ್ಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಸೀಲ್ಡೌನ್ ಮಾಡಿದ ಅಧಿಕಾರಿಗಳು ವೃದ್ಧೆಯ ಮನೆಯಲ್ಲಿ ಮೂವರಿದ್ದು, ಅವರು ವಿವಿಧೆಡೆ ತಿರುಗಾಡಿರುವುದರಿಂದ ತಾಲೂಕು ಆಡಳಿತಕ್ಕೆ ತಲೆ ನೋವಾಗಿದೆ. ಈ ಹಿನ್ನೆಲೆ ತಾಲೂಕು ಆಡಳಿತ ಗ್ರಾಮದ ಮೂರು ಅಡ್ಡ ರಸ್ತೆಗಳನ್ನು ಬ್ಯಾರಿಕೇಡ್ಗಳಿಂದ ಬಂದ್ ಮಾಡಿದೆ. ಗ್ರಾಮವನ್ನು ಕಂಟೇನ್‌ಮೆಂಟ್ ಹಾಗೂ ಬಫರ್ ಝೋನ್‌ಗಳೆಂದು ವಿಂಗಡಣೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಇದ್ದವರಿಗೆ ಅಗತ್ಯ ವಸ್ತುಗಳನ್ನು ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಕೊರೊನಾ ಶಂಕೆ ಮುಂಜಾಗ್ರತಾ ಕ್ರಮವಾಗಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ ಎಂದರು.