ಹಾಸನ:ಇತ್ತೀಚೆಗೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಈ ನಡುವೆ ಇಲ್ಲೋರ್ವ ವಿದ್ಯಾರ್ಥಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ ಘಟನೆ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
"ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗದಿದ್ದರೆ ಸಾಧನೆ ಸಾಧ್ಯವಿಲ್ಲ. ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ನನ್ನ ಬಲಿದಾನ ದಾರಿ ದೀಪವಾಗಲಿ" ಎಂದು ಸಾಯುವ ಮುನ್ನ ವಿಡಿಯೋ ಮಾಡಿಟ್ಟು ವಿದ್ಯಾರ್ಥಿ ನೇಣು ಬಿಗಿದುಕೊಂಡಿದ್ದಾರೆ.
ಹೇಮಂತ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಹೇಮಂತ್ ಹಾಸನ ನಗರದ ಖಾಸಗಿ ತಾಂತ್ರಿಕ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜಿಲ್ಲೆಯ ಅರಸೀಕೆರೆ ತಾಲೂಕಿನ ಹಿರಿಯಾಳು ನಿವಾಸಿ ಎಂದು ತಿಳಿದು ಬಂದಿದೆ.
ವಿಡಿಯೋದಲ್ಲಿ ಹೇಮಂತ್ ಹೇಳಿದ್ದೇನು?
"ನನ್ನ ಸಾವಿನ ನಂತರ ಅಂಗಾಂಗ ದಾನ ಮಾಡಿ. ನನ್ನ ಅಂತ್ಯಕ್ರಿಯೆಯಲ್ಲಿ ಸಿಎಂ, ಶಿಕ್ಷಣ ಸಚಿವರು, ಆದಿ ಚುಂಚನಗಿರಿ ಶ್ರೀಗಳು ಭಾಗಿ ಆಗಬೇಕು" ಎಂದು 13 ನಿಮಿಷದ ವಿಡಿಯೋದಲ್ಲಿ ಹೇಳಿದ್ದಾರೆ.
"ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡಬಹುದು ಅಷ್ಟೇ. ಆದರೆ, ನನ್ನಪ್ಪ ಶಿಕ್ಷಕರು ಅವರ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಧ್ಯವಿತ್ತು. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸಾದ್ಯವೇ ಇಲ್ಲ. ಸಿಎಂ, ಶಿಕ್ಷಣ ಇಲಾಖೆ, ವಿಟಿಯು ವಿಸಿ ಎಲ್ಲರೂ ಚಿಂತಿಸಿ. ಎಲ್ಲಾ ರಾಜಕೀಯ ಪಕ್ಷದ ಗಣ್ಯ ನಾಯಕರು ಶಿಕ್ಷಣ ಸುಧಾರಣೆಗೆ ಸಹಕರಿಸಿ" ಎಂದು ಹೇಮಂತ್ ವಿಡಿಯೋದಲ್ಲಿ ಹೇಳಿದ್ದಾರೆ.
"ನನ್ನ ಸಾವು ವ್ಯರ್ಥ ಆಗಲ್ಲ. ಯಾರಾದರೊಬ್ಬರ ಬಲಿದಾನ ಆಗಲೇ ಬೇಕಿದೆ. ಇದರಿಂದ ನಾನು ಬದಲಾವಣೆಗೆ ಬುನಾದಿ ಹಾಕುವ ಕೆಲಸ ಮಾಡಿದ್ದೇನೆ. ಅಪ್ಪ-ಅಮ್ಮ ಐಲವ್ ಯೂ, ನಾನು ನಿಮ್ಮನ್ನ ಮಿಸ್ ಮಾಡಿಕೊಳ್ತೀನಿ. ಈ ವಿಡಿಯೋವನ್ನು ನ್ಯೂಸ್ ಚಾನಲ್‌ನಲ್ಲಿ ಪ್ರಸಾರ ಮಾಡಿ. ಎಲ್ಲರೂ ಈ ವಿಡಿಯೋವನ್ನು ನೋಡಲಿ. ನನ್ನ ಸಾವಿನ ನಂತರ ಅಪ್ಪ ಅಮ್ಮ ಇಬ್ಬರು ಅನಾಥ ಮಕ್ಕಳನ್ನ ದತ್ತು ಪಡೆದು ಸಾಕಿ. ಆ ಇಬ್ಬರಲ್ಲಿ ನಾನು ಇರುತ್ತೇನೆ" ಎಂದು ವಿದ್ಯಾರ್ಥಿ ಹೇಮಂತ್ ಮನವಿ ಮಾಡಿದ್ದಾರೆ.