ಸಕಲೇಶಪುರ: ಬೆಳಗಾವಿಯಲ್ಲಿ ಕನ್ನಡಿಗರ ವಿರುದ್ದ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಆಗ್ರಹಿಸಿದರು.
ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು: ಕರವೇ ಆಗ್ರಹ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದ ನಂತರ ಮಾತನಾಡಿ, ಕರ್ನಾಟಕವು ವಿವಿಧ ಭಾಷಿಕರನ್ನು ಹೊಂದಿರುವ ಭೂ ಪ್ರದೇಶವನ್ನು ಒಳಗೊಂಡ ಪ್ರದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೆ ಪ್ರತಿಯೊಬ್ಬ ಅನ್ಯಭಾಷಿಕನು ಗೌರವ ನೀಡುವುದು ಹಾಗೂ ಕನ್ನಡ ಭಾಷೆಗೆ, ಕನ್ನಡ ನಾಡಿಗೆ ಸೇವೆ ನೀಡಿದ ಮಹನೀಯರನ್ನು ಗೌರವಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದೆ ಎಂದು ರಮೇಶ ಹೇಳಿದರು.
ಆದರೆ ಬೆಳಗಾವಿಯಲ್ಲಿ ರಾಷ್ಟ್ರಪ್ರೇಮ, ಸ್ವಾತಂತ್ರ್ಯ ಚಳುವಳಿಗೆ ತನ್ನ ಪ್ರಾಣವನ್ನೇ ತ್ಯಜಿಸಿರುವ ವೀರ ಕನ್ನಡಿಗ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದನ್ನು ಅಲ್ಲಿನ ಎಂಇಎಸ್ ಸಂಘಟನೆಯ ಪದಾಧಿಕಾರಿಗಳು ಕೆಡವಿ ದೌರ್ಜನ್ಯ ಎಸಗಿದ್ದಲ್ಲದೆ, ಇದನ್ನು ವಿರೋಧಿಸಿದ ಕನ್ನಡಿಗರ ಮೇಲೆ ಹಲ್ಲೆ ಸಹ ಮಾಡಿರುತ್ತಾರೆ ಎಂದು ಅವರು ಆರೋಪಿಸಿದರು.
ಬೆಳಗಾವಿಯ ಎಂಇಎಸ್ ಸಂಘಟನೆಯ ವರ್ತನೆಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯಾಗಿದೆ. ಶಾಂತಿಪ್ರಿಯರಾದ ಕನ್ನಡಿಗರ ಆಕ್ರೋಷಕ್ಕೆ ಕಾರಣವಾಗಿದ್ದು, ರಾಜ್ಯದಲ್ಲೆಡೆ ಗಲಾಟೆ ಘರ್ಷಣೆಗಳಿಗೆ ಕಾರಣವಾಗಿರುತ್ತದೆ. ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ದೌರ್ಜನ್ಯವನ್ನು ವಿರೋಧಿಸಿದ ಕನ್ನಡಿಗರನ್ನು ಬಂಧಿಸಲಾಗಿದ್ದು ಜೊತೆಗೆ ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ. ಕೂಡಲೆ ಬಂಧಿಸಿರುವ ಕನ್ನಡಿಗರನ್ನು ಬಿಡುಗಡೆ ಮಾಡಬೇಕು ಹಾಗೂ ಅವರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಸಂಘಟನೆಯನ್ನು ನಿಷೇಧ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಮೇಶ ಆಗ್ರಹಿಸಿದರು.