ಹಾಸನ:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧಿಸಲು ಮುಂದಾದರೆ ನಾನು ಈಗಲೂ ರಾಜೀನಾಮೆ ನೀಡುವ ಮಾತಿಗೆ ಬದ್ಧ ಎಂದು ನೂತನ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ನಗರದಲ್ಲಿ ನಡೆದ ಮಾವು ಮೇಳ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ನಾನು ಈಗಾಗಲೇ ದೊಡ್ಡವರು (ದೇವೇಗೌಡ), ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರ ಬಳಿ ಮಾತನಾಡಿದ್ದೇನೆ. ದೊಡ್ಡವರು ಎಲ್ಲ ಸೇರಿ ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಈಗಲೂ ಬದ್ಧನಾಗಿರುತ್ತೇನೆ ಎಂದು ಪುನರುಚ್ಛರಿಸಿದರು.
ಜೂ.17 ಅಥವಾ 18 ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಿ ಅವಕಾಶ ಮಾಡಿಕೊಟ್ಟಿದ್ದಾರೆ. ಅಷ್ಟರಲ್ಲಿ ದೇವೇಗೌಡರು ಯಾವ ತೀರ್ಮಾನ ತೆಗೆದುಕೊಂಡರೂ ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಾಲಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.
ನೂತನ ಸಂಸದ ಪ್ರಜ್ವಲ್ ರೇವಣ್ಣ ಬೇಜಾರು ಶಮನ :
ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ರು. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮನವೊಲಿಸಿದ್ದಾರೆ. ಬುಧವಾರ ನಡೆದ ಜೆಡಿಎಸ್ ಸಭೆಯಲ್ಲಿ ಅವರೂ ಭಾಗಿಯಾಗಿದ್ದರು. ಎಲ್ಲ ಶಾಸಕರೂ ಹಾಗೂ ಸಚಿವರು ವಿಶ್ವನಾಥ್ ಅವರ ಮನವೊಲಿಸಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುತ್ತೇವೆ. ವಿಶ್ವನಾಥ್ ಅವರು ಎರಡು ಮೂರು ದಿನದಲ್ಲಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರ ಸುಭದ್ರ:
ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ಸುಭದ್ರವಾಗಿರಲಿದೆ ಸಿಎಂ ಕುಮಾರಸ್ವಾಮಿ ಅವರು ಇನ್ನೂ ಉತ್ತಮ ಯೋಜನೆ ಕೊಡಲಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಬೀಳಲ್ಲ, ಇದು ಬಿಜೆಪಿಯ ಐದನೇ ಡೆಡ್ ಲೈನ್ ಆಗಿದೆ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ ಎಂದ ಅವರು, ರಮೇಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ಅಸಮಾಧಾನ ಹಿನ್ನೆಲೆ ಮತ್ತು ಬಿಜೆಪಿ ಪಕ್ಷದವರು ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಖಂಡನೀಯ. ಒಳ್ಳೆ ಕೆಲಸ ಮಾಡಲು ಬೆಂಬಲ ಕೊಡಬೇಕು. ಹೀಗೆಲ್ಲಾ ಮಾಡೋದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ವಿಚಾರವಾಗಿ ಮಾತನಾಡಿದ ಅವರು, ಇದು ಒಳ್ಳೇ ನಿರ್ಧಾರ ಎಂದು ಸ್ವಾಗತಿಸಿದರು. ಇದರಿಂದ ಗ್ರಾಮೀಣ ಸಮಸ್ಯೆಗಳ ಅರಿವಾಗುತ್ತದೆ. ಹಿಂದಿನಿಂದಲೂ ಗ್ರಾಮ ವಾಸ್ತವ್ಯ ಮಾಡಿಕೊಂಡು ಬಂದಿದ್ದಾರೆ. ಹೀಗೆ ಮಾಡುವುದರಿಂದ ಜನರ ಹೆಚ್ಚಿನ ಸಮಸ್ಯೆ ಗಮನಕ್ಕೆ ಬಂದು ಮತ್ತಷ್ಟು ಒಳ್ಳೇ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.