ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಪೂರ್ವ ಸಿದ್ದತಾ ಸಭೆ ನಡೆಸಿದ ಶಿಕ್ಷಣ ಸಚಿವರು

ಎಸ್ಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸುವ ಕುರಿತು ಹಾಸನ ಜಿಲ್ಲಾ ಶಿಕ್ಷಣಾಧಿಕಾರಿಗಳೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಭೆ ನಡೆಸಿದರು. ಪರೀಕ್ಷಾ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ನೀಡಿದರು.

SSLC Exam Pre-Preparation Meeting Hassan
ಹಾಸನದಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಪೂರ್ವ ಸಿದ್ದತಾ ಸಭೆ

By

Published : May 24, 2020, 10:23 AM IST

ಹಾಸನ:ಜೂ.15 ರಿಂದ ಎಸ್ಸೆಸೆಲ್ಸಿ ಪರೀಕ್ಷೆ ಹಾಗೂ ಜೂ.18 ರಂದು ಬಾಕಿ ಉಳಿದಿರುವ ಪಿಯುಸಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಎಸ್ಸೆಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ ಘಟ್ಟವಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಇದು ಬಹಳ ಅನಿವಾರ್ಯವಾಗಿರುವುದರಿಂದ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಪರೀಕ್ಷೆ ನಡೆಯುವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಧರಿಸುವುದು, ಪರೀಕ್ಷೆಗೂ ಮುನ್ನ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವುದು ಹಾಗೂ ಪ್ರತೀ ಕೊಠಡಿಗಳಲ್ಲಿ ಸ್ಯಾನಿಟೈಸರ್​ ಅಳವಡಿಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದನ್ನು ಬಳಸುವಂತೆ ಕ್ರಮವಹಿಸುವುದು. ಈ ನಾಲ್ಕು ಅಂಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಹೇಳಿದರು.

ಸಚಿವ ಎಸ್.ಸುರೇಶ್ ಕುಮಾರ್

ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡುವಂತೆ ಕ್ರಮವಹಿಸಲಾಗಿದೆ. ಯಾವುದಾದರೂ ವಿದ್ಯಾರ್ಥಿಗೆ ಆರೊಗ್ಯ ಸಮಸ್ಯೆ ಕಂಡುಬಂದಲ್ಲಿ ಆ ವಿದ್ಯಾರ್ಥಿಯನ್ನು ಬೇರೆ ಕೊಠಡಿಯಲ್ಲಿರಿಸಿ ಪರೀಕ್ಷೆ ಬರೆಸಲಾಗುವುದು. ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮಾಸ್ಕ್ ವಿತರಣೆ, ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸ್ಯಾನಿಟೈಸರ್ ಆಳವಡಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಲಾಕ್ ಡೌನ್ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕಷ್ಟವಾಗಬಹುದು ಎಂಬ ಉದ್ದೇಶದಿಂದ ಏ.29 ರಿಂದ ಚಂದನ ವಾಹಿನಿಯಲ್ಲಿ ಎಸ್ಸೆಸೆಲ್ಸಿ ತರಗತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಈ ವ್ಯವಸ್ಥೆಯ ಅನುಕೂಲ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.

ಜಿಲ್ಲೆಯಲ್ಲಿ 21 ಸಾವಿರ ವಿದ್ಯಾರ್ಥಿಗಳು ಎಸ್ಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಗೊಂದಲ ಬಗೆಹರಿಸಲು ಶಿಕ್ಷಕರು ಪ್ರತಿ ದಿನ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಜೊತೆಗೆ ಆಯಾ ತಾಲೂಕಿನ ಶಾಸಕರು ಸಹ ವಿದ್ಯಾರ್ಥಿಗಳೊಡನೆ ದೂರವಾಣಿ ಮೂಲಕ ಮಾತನಾಡಿ, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಹುರಿದುಂಬಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಶಿಕ್ಷಕರು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ತರಗತಿಗಳನ್ನು ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತಾಗಿ ಹಲವು ಬಾರಿ ಚರ್ಚಿಸಲಾಗಿದ್ದು, ತರಗತಿಗಳನ್ನು ನಡೆಸುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪುನಃ ಚಿಂತಿಸಿ ತೀರ್ಮಾನ ಮಾಡಲಾಗುವುದು. ಅಲ್ಲಿಯವರೆಗೂ ಶಿಕ್ಷಕರು ವಾಟ್ಸ್ ಆ್ಯಪ್​ ಹಾಗೂ ದೂರವಾಣಿ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವ್ಯವಸ್ಥೆಯನ್ನು ಮುಂದುವರೆಸಿ. ಚಂದನ ವಾಹಿನಿಯ ಎಸ್ಸೆಸೆಲ್ಸಿ ತರಗತಿಗಳು ಜೂನ್ ಮೊದಲನೆ ವಾರದವರೆಗೂ ಮುಂದುವರೆಯಲಿದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಬೋಧನೆ ನಡೆಯುತ್ತಿದೆ. ಅದು ಮುಗಿದ ನಂತರ 3 ದಿನಗಳವರೆಗೆ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವುದು ಹೇಗೆ ಎಂದು ಪೂರ್ವಸಿದ್ಧತಾ ತರಗತಿಗಳನ್ನು ನಡೆಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

For All Latest Updates

TAGGED:

ABOUT THE AUTHOR

...view details