ಅರಕಲಗೂಡು:ಸಮೀಪದ ಬಿಸಲಹಳ್ಳಿಯಲ್ಲಿ ಈಶ್ವರ, ಬಸವೇಶ್ವರ ದೇವಾಲಯ ಲೋಕಾರ್ಪಣೆ ಮತ್ತು ದಿಗ್ಬಂದನೆಯ ಕಾರ್ಯಕ್ರಮಗಳು ಫೆ. 23 ರಿಂದ 25ರ ವರೆಗೆ ಭಕ್ತಿಭಾವದಿಂದ ಜರುಗಿದವು.
ಓದಿ: 'ಪೊಗರು' ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಧ್ರುವ ಸರ್ಜಾ..!
ಗ್ರಾಮದಲ್ಲಿ ದೇವಾಲಯ ಲೋಕಾರ್ಪಣೆಯ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗಣಪತಿ ಪೂಜೆ, ದೇವತಾ ಕಳಶಾರಾಧನೆ, ಗಂಗಾಪೂಜೆ, ಗೋಪೂಜೆ, ವಿಗ್ರಹ ಪ್ರತಿಷ್ಠಾಪನೆ, ನೆರವೇರಿದವು. ಗ್ರಾಮದಲ್ಲಿ ಮೂರು ದಿನಗಳ ಕಾಲ ಹಬ್ಬದ ಸಂಭ್ರಮ ಮನೆಮಾಡಿತ್ತು. ಗ್ರಾಮ ಮಧ್ಯಭಾಗದಲ್ಲಿರುವ ನೂತನ ದೇವಾಲಯದಲ್ಲಿ ವಿವಿಧ ಹೋಮ-ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗುರುವಾರ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಭಾರತದಲ್ಲಿನ ಮೌಲ್ಯ ಸಂಸ್ಕೃತಿಗಳಿಂದಾಗಿ ವಿದೇಶಿಯರು ಭಾರತೀಯರು ಮತ್ತು ದೇಶವನ್ನು ವಿಶೇಷವಾಗಿ ನೋಡುತ್ತಾರೆ. ಭಾರತದಲ್ಲಿ ಧರ್ಮವನ್ನು ಮೀರಿ ನಡೆಯುವವರ ಸಂಖ್ಯೆಯು ಕಡಿಮೆಯಿದ್ದು, ಹತ್ತು ಹಲವು ವಿಚಾರಗಳಲ್ಲಿ ಮಂಚೂಣಿಯಲ್ಲಿದೆ.
ತಂದೆ-ತಾಯಿ ಮತ್ತು ಧರ್ಮವನ್ನು ಗೌರವಿಸುವ ಹೊಣೆಯು ಎಲ್ಲರದ್ದಾಗಬೇಕಿದೆ. ಹಿರಿಯರ ಸಂಸ್ಕೃತಿಯನ್ನು ಗೌರವಿಸುವ ದೇಶವು ಉನ್ನತ ಸ್ಥಾನದಲ್ಲಿ ನಿಲ್ಲುತ್ತದೆ ಎಂಬುದಕ್ಕೆ ಭಾರತವು ಉತ್ತಮ ಉದಾಹರಣೆಯಾಗಿದೆ. ಮನುಷ್ಯರು ತಮಗಿರುವ ಜೀವಿತಾವಧಿಯನ್ನು ಒಳ್ಳೆಯ ಕೆಲಸಗಳು ಮತ್ತು ಒಳ್ಳೆಯ ಯೋಚನೆಗಳಿಗೆ ವಿನಿಯೋಗಿಸಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಹಿರಿಯರ ಸಂಸ್ಕೃತಿಯನ್ನು ಪಾಲಿಸುವ ಕೆಲಸವನ್ನು ಯುವ ಸಮುದಾಯ ರೂಢಿಸಿಕೊಳ್ಳಬೇಕಿದೆ. ಆಧ್ಯಾತ್ಮವು ಮನಸ್ಸಿನಲ್ಲಿ ಮನೆಮಾಡಲು ದೇವಾಲಯಗಳು ಅತ್ಯವಶ್ಯಕವಾಗಿದ್ದು, ಬಿಸಲಹಳ್ಳಿಯಲ್ಲಿ ಇಂತಹ ಒಂದು ಉತ್ತಮ ದೇವಾಲಯ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ ಎಂದರು.