ಹಾಸನ: ದಕ್ಷಿಣ ಜೈನಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಜೈನ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ (74) ಇಂದು ಬೆಳಗ್ಗೆ ಅಸ್ತಂಗತರಾಗಿದ್ದಾರೆ. ಬೆಳಗಿನ ಜಾವ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ತಲೆಗೆ ಬಲವಾದ ಗಾಯವಾದ ಕಾರಣ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.
ಶ್ರೀಗಳ ಹಿನ್ನೆಲೆ:ಶಿವಮೊಗ್ಗ ಜಿಲ್ಲೆಯ ವರಂಗ ಗ್ರಾಮದ ಶ್ರೀಮತಿ ಕಾಂತಮ್ಮ ಮತ್ತು ಚಂದ್ರರಾಜ ದಂಪತಿಯ ಪುತ್ರರಾಗಿ ಮೇ. 03, 1949ರಲ್ಲಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಪ್ರಾರಂಭಿಸಿ ಹೊಂಬುಜ ಹಾಗೂ ವಿವಿಧ ಜೈನ ಮಠಗಳಲ್ಲಿ ಕನ್ನಡ, ಸಂಸ್ಕೃತ, ಪ್ರಾಕೃತ, ಹಿಂದಿ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಪದವಿ ಪಡೆದಿದ್ದಾರೆ. ಸತತವಾಗಿ ಜೈನ ಧರ್ಮದ ತತ್ವಶಾಸ್ತ್ರ ಅಧ್ಯಯನ ಕೈಗೊಂಡಿದ್ದರು. ಡಿ.12, 1963 ರಂದು ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದ ಇವರು 1970ರಲ್ಲಿ ಶ್ರವಣಬೆಳಗೊಳದ ಮಠಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಮೈಸೂರು ವಿಶ್ವ ವಿದ್ಯಾಲಯದಿಂದ ಎಂಎ ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ತತ್ವಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿಯನ್ನೂ ಸ್ವಾಮೀಜಿ ಪಡೆದಿದ್ದಾರೆ.
ಶ್ರವಣಬೆಳಗೊಳದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಸ್ಕೃತ ಸಂಸ್ಥೆ ಸ್ಥಾಪಿಸುವ ಮೂಲಕ ಪ್ರಾಕೃತ ಭಾಷೆಗೆ ಮರುಜೀವ ತುಂಬಿದ ಕೀರ್ತಿ ಚಾರುಕೀರ್ತಿ ಸ್ವಾಮೀಜಿಗೆ ಸಲ್ಲುತ್ತದೆ. ಮೊಟ್ಟ ಮೊದಲ ಬಾರಿಗೆ ಪ್ರಾಕೃತ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ ನೀಡುವ ಮೂಲಕ ಗೌರವ ಸಲ್ಲಿಸಿದ ಮೊದಲ ಸ್ವಾಮೀಜಿ ಎಂಬ ಹೆಗ್ಗಳಿಕೆಯೂ ಇವರದ್ದು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪನೆ, ಕನ್ನಡ ಜೈನ ಸಾಹಿತ್ಯ ಸೇವೆಗೆ ಚಾವುಂಡರಾಯ ಪ್ರಶಸ್ತಿ ಸ್ಥಾಪಿಸಿ ವಿಶೇಷ ಸಾಧಕರಿಗೆ ಗೌರವ ನೀಡುತ್ತಾ ಬಂದಿರುವ ಇವರು ದವಲ, ಜಯದವಲ, ಮಹಾದವಲ ಗ್ರಂಥಗಳ 42 ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಅವುಗಳನ್ನು ಪ್ರಕಟಿಸಿ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ.
ಇಂದಿರಾ ಗಾಂಧಿಯಿಂದ ಶ್ರೀಗಳಿಗೆ 'ಕರ್ಮಯೋಗಿ' ಬಿರುದು:ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಆಧ್ಯಾತ್ಮ ಯೋಗಿ, ಭಟ್ಟಾರಕ ಶಿರೋಮಣಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1981ರಲ್ಲಿ ಜರುಗಿದ ಸಹಸ್ರಬ್ದಿ ಬಾಹುಬಲಿ ಮಹಾಮಸ್ತಕಾಭಿಷೇಕವನ್ನು ಬಹಳ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಭಟ್ಟಾರಕ ಸ್ವಾಮೀಜಿಗೆ 'ಕರ್ಮಯೋಗಿ' ಎಂಬ ಬಿರುದು ನೀಡಿ ಗೌರವಿಸಿದ್ದರು.