ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ ಹಾಸನ:ಈ ಜೋಡಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳಿಸದು. ಆದರೂ ತಮ್ಮ ತಮ್ಮ ನಡುವಿನ ಸನ್ನೆ ಮಾತುಗಳ ಮೂಲಕ, ನೀ ನನಗೆ ನಾ ನಿನಗೆ ಎಂಬಂತೆ ಹಸಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಶುರುವಿಟ್ಟಿದ್ದಾರೆ.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಇಂತಹದ್ದೊಂದು ಅಪರೂಪದ ಮದುವೆ ನಡೆಯಿತು. ಬಾಳ್ಳುಪೇಟೆ ಗ್ರಾಮದ ಕೆಂಚಮ್ಮ- ಮಲ್ಲೇಗೌಡ ಸಮುದಾಯ ಭವನದಲ್ಲಿ ನಡೆದ ವಿಶೇಷ ಮದುವೆಯಲ್ಲಿ ಇವರು ಹೊಸ ಜೀವನಕ್ಕೆ ಕಾಲಿಟ್ಟರು. ಈ ಸನ್ನಿವೇಶಕ್ಕೆ ಎರಡೂ ಮನೆಯ ಕುಟುಂಬರಷ್ಟೇ ಅಲ್ಲದೇ, ಸುತ್ತಮುತ್ತಲಿನ ಗ್ರಾಮದವರು ಸೇರಿದಂತೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಕೂಡಾ ಸಾಕ್ಷಿಯಾಗಿದ್ದರು.
ಬಾಳ್ಳುಪೇಟೆ ಸಮೀಪದ ಬನವಾಸೆ ಗ್ರಾಮದ ಸುವರ್ಣ ಮತ್ತು ಅಶೋಕ್ ಕುಮಾರ್ ದಂಪತಿ ಪುತ್ರಿ ಜಾಹ್ನವಿ ಹಾಗೂ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದ ಅನುಸೂಯಮ್ಮ ಮತ್ತು ನಂಜಪ್ಪ ದಂಪತಿ ಪುತ್ರ ನವೀನ್ ಇಬ್ಬರೂ ಹುಟ್ಟಿನಿಂದಲೂ ದೈಹಿಕ ವಿಶೇಷ ಚೇತನರು. ನೋಡಲು ಎಲ್ಲರಂತೆಯೇ ಇದ್ದರೂ, ಇಬ್ಬರಿಗೂ ಮಾತು ಬಾರದು ಹಾಗೂ ಕಿವಿ ಕೂಡಾ ಕೇಳದು.
ಜಾಹ್ನವಿಗೆ ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ ಅನ್ನೋದಷ್ಟೆ ಬಿಟ್ಟರೆ, ಆಕೆ ಡಿಪ್ಲೋಮಾ ಪದವಿ ಪಡೆದ ವಿದ್ಯಾವಂತೆ. ಅಷ್ಟೆ ಅಲ್ಲ, ಬೆಂಗಳೂರಿನ ಅಮೆಜಾನ್ ಕಂಪನಿಯ ಉದ್ಯೋಗಿ. ಇನ್ನು ವರ ನವೀನ ಕೂಡಾ ಪದವಿ ಪಡೆದಿದ್ದು, ಬೆಂಗಳೂರಿನ ಟಿವಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ವಿಶೇಷ. ಮದುವೆಯ ನಂತರ ಇಬ್ಬರು ಟಿವಿಎಸ್ ಕಂಪನಿಯಲ್ಲಿ ಕೆಲಸ ಮಾಡಲು ಬಯಸಿದ್ದು, ಪೋಷಕರು ಸಮ್ಮತಿಸಿದ್ದಾರೆ.
ಎಲ್ಲವೂ ಸರಿಯಿದ್ದರೂ ನಾನಾ ಕಾರಣಗಳಿಗೆ ಮದುವೆಯಾಗದೇ ಉಳಿದಿರುವ ಅದೆಷ್ಟೋ ಮಂದಿ ಇಂದು ಇದ್ದಾರೆ. ಅದರಲ್ಲಿ ವಿಶೇಷ ಚೇತನರಿಗೆ ಹೆಣ್ಣು ಕೊಡುವುದೇ ಕಷ್ಟ. ಅಂಥದ್ರಲ್ಲಿ ಮದುವೆ ವಯಸ್ಸಿಗೆ ಬಂದ ಮಗ ಮತ್ತು ಮಗಳನ್ನು ಯಾರು ಮದುವೆಯಾಗುತ್ತಾರೆ ಎಂಬ ಚಿಂತೆಯಲ್ಲಿದ್ದಾಗ ದೂರದ ಸಂಬಂಧಿಕರೊಬ್ಬರು ತೋರಿಸಿದ ವರನನ್ನು ಸದ್ಯ ವರಿಸಿದ್ದಾರೆ ಜಾಹ್ನವಿ.
ಮದುವೆಯೆಂದರೆ ಮಂತ್ರಗಳನ್ನು ಪಠಿಸಿ ಸಪ್ತಪದಿ ತುಳಿಯುವುದು ಸಂಪ್ರದಾಯ. ಆದ್ರೆ ಮಾತಿಲ್ಲ, ಕತೆ ಇಲ್ಲ ಎಂಬಂತೆ ಹಾವ-ಭಾವದ ಸಹ್ನೆಯಲ್ಲೇ ಮಂಗಳವಾದ್ಯ ನಡುವೆ ಶುಭ ವಿವಾಹವೂ ಮೌನವಾಗಿ ನಡೆಯುವ ಮೂಲಕ ಈ ವಿಶೇಷ ವರ-ವಧು ಹಸಮಣೆ ಏರಿದರು.
ಇದನ್ನೂ ಓದಿ:ನೊಗ, ಉಳುಮೆ, ಮುದ್ದೆ-ಉಪ್ಸಾರಿನ ಪ್ರೀ ವೆಡ್ಡಿಂಗ್ ಶೂಟ್; ಮದುವೆಗೆ ರೈತನ ಕರೆಯೋಲೆ - ವಿಡಿಯೋ