ಹಾಸನ: ನವರಾತ್ರಿ ಪ್ರಾರಂಭವಾಗಿ ಇಂದಿಗೆ ಎಂಟನೇ ದಿನ. ಅಂದರೆ ದುರ್ಗಾಷ್ಟಮಿ ಹಬ್ಬ. ಹಬ್ಬದ ಪ್ರಯುಕ್ತ ಇವತ್ತು ಹೊಯ್ಸಳರ ಕಾಲದ ಪುರಾತನ ದೇವಾಲಯಗಳಲ್ಲಿ ಒಂದಾದ ಬರಗೂರು ಚೌಡೇನಹಳ್ಳಿಯ ಚೆನ್ನಕೇಶವ ದೇವಾಲಯದಲ್ಲಿ ದುರ್ಗಾ ಹೋಮ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಯಿತು.
ದುರ್ಗಾಷ್ಟಮಿ ಹಬ್ಬ.. ಬರಗೂರು ಚೌಡೇನಹಳ್ಳಿಯ ಚೆನ್ನಕೇಶವ ದೇವಾಲಯದಲ್ಲಿ ದುರ್ಗಾ ಹೋಮ.. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀವೈಷ್ಣವ ಸೇವಾ ಸಭಾ ವತಿಯಿಂದ ದುರ್ಗಾಷ್ಟಮಿ ಅಂಗವಾಗಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ಸ್ವಸ್ತಿಪುಣ್ಯಾಹ, ದೇವನಾಂದಿ ರಕ್ಷಾಬಂಧನ, ಪಂಚಗವ್ಯ ಸ್ನಪನ ಕಳಶಸ್ಥಾಪನೆ, ಮಂಗಳಾರತಿ, ಸಭಾಗ್ನಿ ಕುಂಡದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಶ್ರೀದುರ್ಗಾಸಪ್ತಶತಿ ಪಾರಾಯಣ ಹಾಗೂ ಚಂಡಿಕಾಹೋಮ, ಮಹಾಪೂರ್ಣಾಹುತಿ, ದುರ್ಗಾಚನ್ನಕೇಶವನಿಗೆ ಕುಂಭಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ದಿವ್ಯಾಲಂಕಾರ, ದಿವ್ಯದರ್ಶನ, ಅಷ್ಠಾವಧಾನ ಸೇವೆ ನಡೆಯಿತು.
ದಿವ್ಯದರ್ಶನದ ಬಳಿಕ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಇನ್ನು, ಇದೇ ವೇಳೆ ರಾಮಾನುಜಾಚಾರ್ಯರಿಗೆ ಕೂಡ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯಿಂದ ಅಷ್ಟೇ ಅಲ್ಲದೆ ಹೊರಗಿನಿಂದಲೂ ಕೂಡಾ ಭಕ್ತಾದಿಗಳು ಆಗಮಿಸಿದ್ದು, ವಿಶೇಷವಾಗಿತ್ತು.
ಇದೇ ವೇಳೆ ಮಾತನಾಡಿದ ಪುಟ್ಟಣ್ಣಯ್ಯ, ಹೊಯ್ಸಳರ ಕಾಲದ ದೇವಾಲಯ ಇದಾಗಿದ್ದು ಈಗಾಗಲೇ ಅರ್ಧಭಾಗದಷ್ಟು ದೇವಾಲಯದ ಪುನರಜ್ಜೀವನ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಸರ್ಕಾರದ ಸಹಾಯದೊಂದಿಗೆ ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ ಭಕ್ತರ ಸಹಾಯದ ಅವಶ್ಯಕತೆ ಕೂಡ ಇದ್ದು, ದಾನಿಗಳು ಸಹಾಯಕ್ಕೆ ಬಂದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ನಾಳೆ ಆಯುಧ ಪೂಜೆಯ ಬಳಿಕ ವಿಜಯದಶಮಿಯ ದಿನ ದೇವರಿಗೆ ವಿಶೇಷ ಅಲಂಕಾರ ಮಾಡಿ ದೇವಾಲಯದ ಮುಂಭಾಗದಲ್ಲಿ ಬಾಳೆಕಂದು ಕಡಿಯುವ ಮೂಲಕ ನವರಾತ್ರಿಗೆ ತೆರೆಬೀಳಲಿದೆ. ದುರ್ಗಾಷ್ಟಮಿ ಪ್ರಯುಕ್ತ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.