ಹಾಸನ: ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆಗೆ ಬಂದಿರೋದು ರಾಜಕೀಯ ಗಿಮಿಕ್ ಅಲ್ಲ. ಮಾತನಾಡುವವರು ಎಷ್ಟೇ ಮಾತನಾಡಲಿ ಆದರೆ ಬಯಲುಸೀಮೆಗೆ ನೀರು ಹರಿದರೆ ಸಾಕು ಎಂದು ವಿಧಾನ ಸಭೆ ಸ್ಪೀಕರ್ ರಮೇಶ್‌ಕುಮಾರ್ ಹೇಳಿದ್ರು.
ಬಯಲುಸೀಮೆಯ ರೈತರ ನಿಯೋಗವನ್ನು ಕರೆತಂದು ಪರಿಶೀಲನೆ ನಡೆಸಿದರು. ತಾಲೂಕಿನ ಕೆಸಗಾನಹಳ್ಳಿ, ಹೆಬ್ಬನಹಳ್ಳಿ, ದೊಡ್ಡನಾಗರ ಗ್ರಾಮದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಬೃಹತ್ ಕಾಮಗಾರಿ ವೀಕ್ಷಣೆ ಮಾಡಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದ ಸ್ಪೀಕರ್ ಕೋಲಾರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾನೆ ತಲೆದೂರಿದೆ. ಆ ಭಾಗದ ಜನರು ನೀರು ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಾಮಗಾರಿ ಯಾವ ಹಂತದಲ್ಲಿ ಇದೆ, ಏನಾದರೂ ಅಡ್ಡಿ ಆತಂಕಗಳಿವೆಯೋ ಈ ಎಲ್ಲವನ್ನೂ ಪರಿಶೀಲನೆ ಮಾಡುವ ಸಲುವಾಗಿ ಭೇಟಿ ನೀಡಿದ್ದೇನೆ ಎಂದವರು ತಿಳಿಸಿದರು.
ರಮೇಶ್ ಕುಮಾರ್ ಅವರೊಂದಿಗೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಿಂದ ಸುಮಾರು 200ಕ್ಕೂ ಹೆಚ್ಚು ರೈತರು ಬಸ್ ಗಳಲ್ಲಿ ಆಗಮಿಸಿ ಕಾಮಗಾರಿ ವೀಕ್ಷಣೆ ಮಾಡಿದ್ರು. ಇದು ನಮ್ಮ ಭಾಗದ ಕನಸು. ಅದನ್ನು ನೋಡಲು ನಾವು ಬಂದಿದ್ದೇವೆ. ನಮ್ಮ ಭಾಗದಲ್ಲಿ ಈಗಾಗಲೇ 1500ಕ್ಕೂ ಹೆಚ್ಚು ಆಳಕ್ಕೆ ಅಂತರ್ಜಲ ಕುಸಿದಿದೆ. ಕುಡಿಯುವುದಕ್ಕೆ ಈಗಾಗಲೇ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ ಆದ್ರೆ, ಜಾನುವಾರುಗಳ ಪರಿಸ್ಥಿತಿ ಹೇಳತೀರದಾಗಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.