ಹಾಸನ: ಜಿಲ್ಲೆಯಲ್ಲಿ ಎಲ್ಲರೂ ಸಂಚಾರಿ ನಿಯಮ ಪಾಲಿಸುವುದು ಕಡ್ಡಾಯ. ನಿಯಮ ಪಾಲನೆ ಸಾರ್ವಜನಿಕರ ಒಳಿತಿಗಾಗಿಯೇ ಹೊರತು ಸರ್ಕಾರ ನಮಗೆ ಟಾರ್ಗೆಟ್ ನೀಡಿಲ್ಲ ಎಂದು ಎಸ್ಪಿ ಆರ್. ಶ್ರೀನಿವಾಸ್ ಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಸಾವಿರಕ್ಕಿಂತ ಹೆಚ್ಚು ಟ್ರಾಫಿಕ್ ಕೇಸ್ ದಾಖಲಿಸಲಾಗಿದೆ. ಎಲ್ಲೆಲ್ಲಿ ಅಪಘಾತ ಹೆಚ್ಚಾಗಿ ಸಂಭವಿಸುತ್ತಿದೆ, ಎಲ್ಲಿ ರಸ್ತೆ ದುರಸ್ತಿ ಅಥವಾ ತಾಂತ್ರಿಕ ಸಮಸ್ಯೆ ಇದ್ದರೆ ಬಗೆಹರಿಸುವಂತೆ ಪಿಡಬ್ಲೂಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೆ ಚರ್ಚಿಸಲಾಗಿದೆ. ಅಲ್ಲದೆ ಕೋವಿಡ್ ಇರುವ ಕಾರಣ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ತಪಾಸಣೆ ನಿಲ್ಲಿಸಲಾಗಿತ್ತು. ಆದರೆ ಮತ್ತೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ದೂರು ದಾಖಲಿಸಲಾಗುವುದು ಎಂದರು.
ಹಾಸನ ಎಸ್ಪಿ ಆರ್. ಶ್ರೀನಿವಾಸ್ ಗೌಡ ಖಡಕ್ ಎಚ್ಚರಿಕೆ ಪ್ರಕರಣಗಳಲ್ಲಿ ಆಟೋ ವಶಕ್ಕೆ ಪಡೆದಾಗ ವಿಮೆ ಇಲ್ಲದಿದ್ದರೆ, ವಿಮೆ ಮಾಡಿಕೊಂಡು ಬಂದರೆ ನಂತರ ಆಟೋ ಬಿಡಲಾಗುತ್ತಿದೆ. ಹೆಲ್ಮೆಟ್ ಇಲ್ಲದಿದ್ದರೆ, ಹೆಲ್ಮೆಟ್ ತಂದ ಬಳಿಕ ಬೈಕ್ ಬಿಡಲಾಗುತ್ತಿದೆ. ದಂಡ ಸಂಗ್ರಹ ಒಂದೇ ಉದ್ದೇಶವಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 30 ಮಟ್ಕಾ ಕೇಸ್, 315 ಅಬಕಾರಿ ಕೇಸ್, 3 ಕ್ರಿಕೆಟ್ ಬೆಟ್ಟಿಂಗ್ ಕೇಸ್ ದಾಖಲಿಸಲಾಗಿದೆ. ಈ ರೀತಿ ರೈಡ್ಗಳು ಮುಂದೆಯೂ ನಡೆಯಲಿವೆ. ಕಳೆದ ಎರಡು ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ರೈಡ್ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾಕಷ್ಟು ದೂರು ಬಂದಿದ್ದು, ರೈಡ್ ಮಾಡಲಾಗುವುದು. ಅಲ್ಲದೆ ಈ ವರ್ಷ 170 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ನಗರದಲ್ಲಿ ಹೆಚ್ಚು ಜನ ಸೇರಿ ಪ್ರತಿಭಟನೆ ಮಾಡುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನೆಗೆ ಹೆಚ್ಚು ಜನ ಸೇರುತ್ತಿದ್ದು, ಯಾರೂ ಅಂತರ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಜಿಲ್ಲೆಯ ಎಲ್ಲಾ ಮುಖಂಡರ ಜೊತೆಗೆ ಚರ್ಚೆ ಮಾಡಲಾಗಿದೆ. ಜಿಲ್ಲಾಧಿಕಾರಿ ಅವರ ಜೊತೆಗೂ ಚರ್ಚಿಸಿದ್ದು, ಪ್ರತಿಭಟನೆ ಮಾಡಲು ಜಾಗ ನಿಗದಿ ಮಾಡಲಾಗುವುದು ಎಂದು ಹೇಳಿದರು.
20 ಜನಕ್ಕಿಂತ ಹೆಚ್ಚು ಜನರು ಸೇರದೆ, ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿ ಅವರೇ ಆದೇಶ ಹೊರಡಿಸಲಿದ್ದಾರೆ. ಇದು ಯಾರ ಪ್ರತಿಭಟನೆಯ ಹಕ್ಕನ್ನೂ ಕಿತ್ತುಕೊಳ್ಳುವ ಅಥವಾ ಮುಖಂಡರನ್ನು ಹತ್ತಿಕ್ಕುವ ಉದ್ದೇಶ ಅಲ್ಲ ಎಂದರು.
ಲಾಕ್‌ಡೌನ್‌ನಿಂದ ಈವರೆಗೆ ಮಾಸ್ಕ್ ಧರಿಸದೇ ಇರುವ ವಿಚಾರಕ್ಕೆ ಸುಮಾರು 12,561 ಪ್ರಕರಣ ದಾಖಲಿಸಿದ್ದು, 12.56 ಲಕ್ಷ ದಂಡ ಸಂಗ್ರಹ ಮಾಡಲಾಗಿದೆ. ಅಲ್ಲದೆ ಸಾಮಾಜಿಕ ಅಂತರ ಪಾಲನೆ ಮಾಡದೆ ಇರುವ ಸಂಬಂಧ 300 ಪ್ರಕರಣ ದಾಖಲಿಸಲಾಗಿದೆ. ಕಳೆದ 10 ದಿನದಿಂದ 5,500 ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದರು.