ಹಾಸನ: ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ ನಡೆದಿದೆ. ಬುಧವಾರ ಸಂಜೆ ದುಷ್ಕರ್ಮಿಗಳು ಮನೆಯ ಬಳಿಯೇ ಮಹಿಳೆಯನ್ನ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಗ್ರಾಮದ ಗುರುಪ್ರಸಾದ್ ಅವರ ಪತ್ನಿ ರೇವತಿ(35) ಕೊಲೆಯಾದ ಮಹಿಳೆ.
ಮನೆಯಲ್ಲಿ ಪತಿ ಹಾಗೂ ಮಕ್ಕಳು ಇಲ್ಲದ ವೇಳೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ಕೊಚ್ಚಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಮಹಿಳೆ ಮಾ.16ರ ಸಂಜೆ ಮನೆ ಹೊರಗೆ ಬಟ್ಟೆ ಒಗೆಯುತ್ತಾ ಕುಳಿತಿದ್ದರು. ಆಗ ಅವರ ಮೇಲೆ ಆತ್ಯಾಚಾರ ಎಸಗುವ ಉದ್ದೇಶದಿಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಆಕೆ ನಿರಾಕರಿಸಿ ಕಿರುಚಾಡಿದ್ದು, ಕೊನೆಗೆ ಆರೊಪಿಗಳು ಮಹಿಳೆಯನ್ನು ಸ್ಥಳದಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕಲಬುರಗಿ : ಹೋಳಿ ಹಬ್ಬಕ್ಕೆ ಊರಿಗೆ ಬಂದವನನ್ನು ಕೊಂದು ಸುಟ್ಟು ಹಾಕಿದ ಕಿರಾತಕರು
ಸ್ಥಳಕ್ಕೆ ಶ್ವಾನದಳ ಹಾಗೂ ಎಎಸ್ಪಿ ಡಾ.ನಂದಿನಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಹಿಂದೆ ಇದೇ ಗ್ರಾಮದಲ್ಲಿ ಒಬ್ಬ ಮಹಿಳೆಯ ಕೊಲೆ ನಡೆದಿತ್ತು. ಅದೇ ರೀತಿಯಲ್ಲಿಯೇ ಈ ಮಹಿಳೆಯ ಕೊಲೆ ನಡೆದಿದೆ. ಆರೋಪಿಗಳು ಬಿಟ್ಟು ಹೋಗಿರುವ ಕೆಲ ಮಾಹಿತಿಗಳನ್ನು ಕಲೆ ಹಾಕಿರುವ ಪೊಲೀಸರು ಶೀಘ್ರವೇ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.