ಹಾಸನ: ಮಲೆನಾಡು ಭಾಗದಲ್ಲಿ ಹೆಚ್ಚಾಗುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಡಿಸೆಂಬರ್ 29ರಂದು ಸಕಲೇಶಪುರದ ಹೊಸಕೊಪ್ಪಲಿನಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದು ಗ್ರಾಮಸ್ಥರು ತೋಡಿದ್ದ ಖೆಡ್ಡಾಕ್ಕೆ ಇದೀಗ ಮರಿಯಾನೆ ಬಿದ್ದಿದೆ.
ನಿನ್ನೆ ರಾತ್ರಿ ಹೊಸಕೊಪ್ಪಲು ಗ್ರಾಮದ ಮಹಿಂದ್ರ ಎಂಬುವರ ತೋಟ ಪ್ರವೇಶಿಸಿದ ಕಾಡಾನೆಗಳ ಹಿಂಡು ದಾಳಿ ನಡೆಸಿ, ಬೆಳೆ ಹಾಳು ಮಾಡಿದ್ದವು. ಇಂದು ಬೆಳಗ್ಗೆ ವಾಪಸ್ ಕಾಡಿಗೆ ತೆರಳುವಾಗ ರೈತರು ತೋಡಿದ್ದ ಗುಂಡಿಗೆ ಮರಿಯಾನೆ ಬಿದ್ದಿದ್ದು, ಸಿಕ್ಕಿಹಾಕಿಕೊಂಡಿದೆ.
'ಕಾಡಾನೆಗಳು ಪ್ರತಿನಿತ್ಯ ನಾವು ಬೆಳೆದ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಅವುಗಳು ಓಡಾಡಿದರೂ ಬೆಳೆ ಹಾಳಾಗುತ್ತಿದೆ. ಕಾಫಿ ತೋಟವಂತೂ ಸಂಪೂರ್ಣವಾಗಿ ಹಾಳಾಗುತ್ತಿದೆ. ಈ ಭಾಗದ ಪ್ರಾಣಿಗಳು ಮತ್ತು ಮಾನವ ಸಂಘರ್ಷವನ್ನು ತಡೆಯಲು ಶಾಶ್ವತ ಪರಿಹಾರ ಹುಡುಕಿಕೊಡಿ ಅಂತ ಕಳೆದ ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ನಿರಂತರವಾಗಿ ಮನವಿ ಮಾಡಿದ್ದೇವೆ. ಜೊತೆಗೆ ಪ್ರತಿಭಟನೆಯ ಮೂಲಕವೂ ಆಗ್ರಹ ಮಾಡಿದ್ವಿ. ಆದರೆ, ಶಾಶ್ವತ ಪರಿಹಾರ ದೊರಕಿಸಿ ಕೊಡುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಮುಂದಾಗಿಲ್ಲ. ಹಾಗಾಗಿ, ನಾವೇ ಈ ರೀತಿಯ ಹೊಸ ಯೋಜನೆ ಮಾಡಿದ್ದೆವು' ಎಂದು ಹೊಸಕೊಪ್ಪಲು ಗ್ರಾಮಸ್ಥ ಚರಣ್ ತಿಳಿಸಿದರು.