ಹಾಸನ:ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಆಪ್ತ ಸಹಾಯಕರಲ್ಲಿ ಒಬ್ಬರಾಗಿರುವ ಚನ್ನರಾಯಪಟ್ಟಣದ ಉದ್ಯಮಿ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವತ್ಥ ಎಂಬವರ ಮೇಲೆ ನಡೆದಿದ್ದ ದುಷ್ಕರ್ಮಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪೊಲೀಸ್ ಅಧಿಕಾರಿ ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಆರ್ ಸತೀಶ್ (38), ಸಿ ಮುರುಗನ್, ಆರ್ ಮಧುಸೂದನ್ (38), ಚನ್ನರಾಯಪಟ್ಟಣದ ಬಿ ಎಸ್ ತೇಜಸ್ವಿ (37), ಅರವಿಂದ್ (40) ಹಾಗೂ ಕೋಲಾರದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿ ಜೆ ಅಶೋಕ್ ಬಂಧಿತರು.
ಅಕ್ಟೋಬರ್ 10ರಂದು ಎಂದಿನಂತೆ ಅಶ್ವತ್ಥ ರೇವಣ್ಣನ ಮನೆಗೆ ಭೇಟಿ ಕೊಟ್ಟು ಕೆಲ ಹೊತ್ತು ಅವರೊಂದಿಗೆ ರಾಜಕೀಯ ವಿಚಾರಗಳನ್ನ ಚರ್ಚೆ ಮಾಡಿ, ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಯಿಂದ ತಮ್ಮ ಫಾರ್ಚುನರ್ ವಾಹನದಲ್ಲಿ ಚನ್ನರಾಯಪಟ್ಟಣಕ್ಕೆ ಹೊರಟಿದ್ದರು. ಈ ವೇಳೆ, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಅಶ್ವತ್ಥ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ರು. ಆದರೆ ಅವರ ಯೋಜನೆ ವಿಫಲವಾಗಿ ಕೂದಲೆಳೆ ಅಂತರದಲ್ಲಿ ಅಶ್ವತ್ಥ್ ತಮ್ಮ ಪ್ರಾಣ ಉಳಿಸಿಕೊಂಡಿದ್ದರು.
ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಡೋ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಎಸ್ಪಿ ಮೊಹಮ್ಮದ್ ಸುಜಿತಾ, ತನಿಖೆ ವೇಳೆ ಕೋಲಾರ ಆಂತರಿಕ ಭದ್ರತಾ ವಿಭಾಗದ ಇನ್ಸ್ಪೆಕ್ಟರ್ ಅಶೋಕ್ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅಶೋಕ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಉಳಿದ 5 ಮಂದಿಯನ್ನು ಬೆಂಗಳೂರಿನ ಬಂಧಿಸಲಾಗಿದ್ದು, ಇನ್ನುಳಿದ ಇಬ್ಬರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬೆಂಗಳೂರು: ನಾಲ್ವರ ಕಳ್ಳರ ಬಂಧನ, 137 ಗ್ರಾಂ ಚಿನ್ನಾಭರಣ, 31 ಬೈಕ್ ವಶಕ್ಕೆ