ಹಾಸನ:ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡುತ್ತಿದ್ದಾರೆ, ಅವರಿಗೆ ಹಳೆಯದೆಲ್ಲ ಮರೆತುಹೋಗಿದೆ. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದಾಗ ಯಾರ ಹೆಗಲ ಮೇಲೆ ಕುಳಿತಿದ್ದರು ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ನಡೆಸಲು ನಾವು ಅವರ ಬಳಿ ಹೋಗಿರಲಿಲ್ಲ, ಬದಲಾಗಿ ಕಾಂಗ್ರೆಸ್ನವರೇ ನಮ್ಮ ಬಳಿ ಬಂದಿದ್ದರು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೂ ಅಧಿಕಾರ ನಡೆಸಿದ್ದು ಕಾಂಗ್ರೆಸ್ ನವರು ಎಂದು ಕುಟುಕಿದರು.
ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸುದ್ದಿಗೋಷ್ಠಿ ಸಿದ್ದರಾಮಯ್ಯ ಈ ರೀತಿ ಲಘುವಾಗಿ ಮಾತನಾಡುವುದನ್ನ ಮೊದಲು ಬಿಡಬೇಕು. ನಾವು ಅವರ ಹೆಗಲ ಮೇಲೆ ಕುಳಿತು ಅಧಿಕಾರ ನಡೆಸಿಲ್ಲ. ಬದಲಾಗಿ ಅವರೇ ನಮ್ಮ ಹೆಗಲ ಮೇಲೆ ಕುಳಿತು ಅಧಿಕಾರ ಮಾಡಿದ್ದರು ಎಂದು ಕಿಡಿಕಾರಿದರು.
ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿರುವ ಬಗ್ಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷರು, ಎಚ್.ಡಿ ಕುಮಾರಸ್ವಾಮಿ ಭಾವನಾತ್ಮಕ ಜೀವಿ, ಜನರ ನೋವನ್ನ ಕಂಡಾಗ ಕಣ್ಣೀರು ಬರುವುದು ಸಹಜ. ಸಿದ್ದರಾಮಯ್ಯ ಕಠಿಣ ಹೃದಯ ಹೊಂದಿರುವವರು. ಅವರಿಗೆ ಬಡವರ ಭಾವನೆಗಳು ಅರ್ಥವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ಈ ಘಟನೆಯ ಜವಾಬ್ದಾರಿ ಹೊತ್ತು ಸಿಎಂ ಆದಿತ್ಯನಾಥ್ ರಾಜೀನಾಮೆ ನೀಡಬೇಕು. ಪ್ರಧಾನಿ ಮೋದಿಯವರು ಭೇಟಿ ಬಚಾವೋ, ಭೇಟಿ ಪಡಾವೋ ಎನ್ನುತ್ತಾರೆ. ಆದರೆ ದೇಶದಲ್ಲಿ ಆಡಳಿತ ಯಂತ್ರ ಮಹಿಳೆಯರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಮೋದಿಯವರು ಸಾರ್ವಜನಿಕವಾಗಿ ಈ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಎಚ್ ಕೆ ಕುಮಾರಸ್ವಾಮಿ, ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವೇ ಇಲ್ಲ. ಘಟನೆ ಬಗ್ಗೆ ಅನ್ಯಾಯಕ್ಕೊಳಗಾದ ಯುವತಿಯೇ ಸಾಯುವ ಮುನ್ನ ನ್ಯಾಯ ಕೇಳಿದ್ದಾಳೆ. ನಿರ್ಭಯ ಪ್ರಕರಣದಂತೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸಂದರ್ಭದಲ್ಲಿ ದಾಳಿ ನಡೆದಿರುವುದು ರಾಜಕೀಯ ಪ್ರೇರಿತವಾಗಿರಬಹುದು. ಇದನ್ನು ಡಿಕೆಶಿ ಯಾವ ರೀತಿ ಸ್ವೀಕರಿಸುವರೋ ಕಾದು ನೋಡಬೇಕು ಎಂದು ಅವರು ಹೇಳಿದರು.