ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಹಾಸನ: "ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಇದರ ಜೊತೆಗೆ ತಂದೆಗೆ ನೈತಿಕ ಬಲ ಹೆಚ್ಚುತ್ತದೆ. ಯಾವುದೇ ಅಡೆತಡೆ ಇಲ್ಲದೇ ಅವರು ಮುಂದಿನ ಐದು ವರ್ಷ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ" ಎಂದು ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯನವರ ಮಗ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಹೊಳೆನರಸೀಪುರ ತಾಲೂಕಿನ ಅಣ್ಣೆಚಾಕನಹಳ್ಳಿಯಲ್ಲಿ ಮಂಗಳವಾರ ನಡೆದಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, "ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಬಗ್ಗೆ ಮತ್ತೆ ಚರ್ಚೆ ಶುರುವಾಗುವ ಸಾಧ್ಯತೆ ಇದೆ. ಅನ್ನ ಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯದಂತಹ ಹತ್ತು ಹಲವು ಭಾಗ್ಯಗಳನ್ನು ಸಿದ್ದರಾಮಯ್ಯನವರು ಕೊಟ್ಟಿದ್ದರು. ಅನ್ನ ಭಾಗ್ಯ , ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ ಕಾರ್ಯಕ್ರಮಗಳನ್ನು ನೀಡುವ ಕುರಿತು ಸಿದ್ದರಾಮಯ್ಯನವರೇ ಭರವಸೆ ನೀಡಿದ್ದರು. ಇವಿಷ್ಟನ್ನು ಸರ್ಕಾರ ಒಂದು ವರ್ಷ ತುಂಬುವುದರೊಳಗೆ ಜಾರಿಗೆ ತಂದಿದೆ. ನಾವು ನುಡಿದಂತೆ ನಡೆಯುವವರು ಎಂದು ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ" ಎಂದರು.
"ನಮ್ಮ ಪಕ್ಷಕ್ಕೆ ಹಾಗೂ ಸಿದ್ದರಾಮಯ್ಯನವರಿಗೆ ಬಡವರ ಪರ ಕೆಲಸ ಮಾಡಬೇಕು ಎಂಬ ಉದ್ದೇಶ ಯಾವಾಗಲೂ ಇರುತ್ತದೆ. ನೀವು ಅವರಿಗೆ ನೀಡುವ ಬೆಂಬಲ ಮುಂದುವರಿಸಬೇಕು. ಮತ್ತೆ ಲೋಕಸಭಾ ಚುನಾವಣೆ ಬರುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎದುರಿಸಬೇಕಾಗಿದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯನವರಿಗೆ ಇನ್ನೂ ಹೆಚ್ಚಿನ ಬಲ ಬರುತ್ತದೆ. ಬಡವರ ಪರವಾಗಿ ಸರ್ಕಾರ ಈ ಕಾರ್ಯಕ್ರಮಗಳಿಗೆ ಸುಮಾರು 56 ಸಾವಿರ ಕೋಟಿ ರೂ ಖರ್ಚು ಮಾಡುತ್ತಿದೆ. ಈ ಹಣವನ್ನು ಸಮಾಜ ಕಲ್ಯಾಣಕ್ಕಾಗಿ ಬಳಸುತ್ತಿದ್ದೇವೆ. ಇಷ್ಟೊಂದು ಹಣವನ್ನು ಬಹುಶಃ ಯಾವ ಸರ್ಕಾರವೂ ಖರ್ಚು ಮಾಡಿರಲಿಲ್ಲ. ಈ ಹಣ ಖರ್ಚು ಮಾಡಬೇಕಾದರೆ ಜನರ ಬೆಂಬಲ ನಮ್ಮ ಸರ್ಕಾರಕ್ಕೆ ಇದೆ. ನಾವು ಮಾಡುತ್ತಿರುವ ಒಳ್ಳೆಯ ಕೆಲಸಕ್ಕಿದೆ" ಎಂದು ಹೇಳಿದರು.
"ಈ ಭಾಗಕ್ಕೆ ಮೊದಲ ಬಾರಿ ಬಂದಿದ್ದೇನೆ. ಇಲ್ಲಿ ಹಲವಾರು ಕೆಲಸಗಳಾಗಬೇಕು ಎಂದು ಇಲ್ಲಿನ ಮುಖಂಡರು ಹೇಳುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ತಾಲ್ಲೂಕು ಆಗಬೇಕು ಎಂದೂ ಹೇಳುತ್ತಿದ್ದಾರೆ. ಈ ಭಾಗದ ಪರಿಸ್ಥಿತಿ ನನಗೆ ಗೊತ್ತಿಲ್ಲ. ಖಂಡಿತಾ ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ತಾಲ್ಲೂಕು ಮಾಡಿಸಿಕೊಡುವಂತಹ ಕೆಲಸ ಮಾಡೋಣ. ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ರಸ್ತೆಗಳು ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡೋಣ" ಎಂದು ಭರವಸೆ ನೀಡಿದರು.
ಇದನ್ನೂ ಓದಿ:7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ತೀರ್ಮಾನ: ಸಿಎಂ ಸಿದ್ದರಾಮಯ್ಯ