ಹಾಸನ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಹೊಗೆ ತುಂಬಿದ್ದರಿಂದ ತುರ್ತು ನಿಗಾ ಘಟಕದಲ್ಲಿದ್ದ ಶಿಶುಗಳನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸಿರುವ ಘಟನೆ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಸರ್ಕಾರಿ ಜಿಲ್ಲಾಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ವಾರ್ಡ್‌ನಲ್ಲಿ ಸಂಪೂರ್ಣ ಹೊಗೆ ಆವರಿಸಿದೆ. ಬಳಿಕ ತಕ್ಷಣ ಎಚ್ಚೆತ್ತ ಆಸ್ಪತ್ರೆಯ ಸಿಬ್ಬಂದಿ ನವಜಾತ ಶಿಶುಗಳನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ.
ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಮಕ್ಕಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಈ ವೇಳೆ ಇಲ್ಲಿನ ಹಾಲ್ ತುಂಬೆಲ್ಲ ಹೊಗೆ ಆವರಿಸಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಯಿತು. ಈ ವೇಳೆ ಎಚ್ಚೆತ್ತ ಆರೋಗ್ಯ ಸಿಬ್ಬಂದಿಗಳು ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು, ಐಸಿಯುನಲ್ಲಿದ್ದ 24 ನವಜಾತ ಶಿಶುಗಳು ರಕ್ಷಿಸಿದ್ದಾರೆ. ಹೊಗೆ ತುಂಬಿಕೊಂಡ ಹಿನ್ನೆಲೆ ಮಕ್ಕಳ ಪೋಷಕರು ದಿಗ್ಭಾಂತರಾಗಿದ್ದರು. ಸದ್ಯ ಎಲ್ಲಾ ಮಕ್ಕಳು ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.
ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕರಾದ ಬಿ.ಸಿ. ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಮೂರ್ತಿ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವ ರೀತಿ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಗರ್ಭಿಣಿ ಮಹಿಳೆಗೆ ಬಸ್ನಲ್ಲೇ ಹೆರಿಗೆ: ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಮಾರ್ಗ ಮಧ್ಯದಲ್ಲಿಯೇ ಬಸ್ ಮಹಿಳಾ ನಿರ್ವಾಹಕಿ ಮಹಿಳೆಗೆ ಹೆರಿಗೆ ಮಾಡಿಸಿರುವ ಘಟನೆ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದಿತ್ತು.