ಅಭಿಮಾನಿಗಳ ಅಯ್ಕೆಯಂತೆ ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡ ಹಾಸನ :ಜೆಡಿಎಸ್ಟಿಕೆಟ್ ವಿಚಾರವಾಗಿಹಾಸನ ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಗೊಂದಲದ ಗೂಡಾಗುತ್ತಿರುವ ನಡುವೆ ಇದೇ ಪಕ್ಷದ ಅರಸೀಕೆರೆ ಶಾಸಕ 'ತೆನೆ' ಇಳಿಸಲು ಮುಂದಾಗಿದ್ದಾರೆ. ಆರು ತಿಂಗಳಿನಿಂದ ಪಕ್ಷದ ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗಿಯಾಗದೇ ದೂರವೇ ಉಳಿದಿದ್ದ ಗೌಡರು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಬುಧವಾರ ಬಹಿರಂಗ ಸಭೆ ನಡೆಸಿ ಅಂತಿಮವಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ವಿಚಾರ ತಿಳಿಸಿದರು.
"ಎಂಎಲ್ಸಿ ಮಾಡುವ ವಿಚಾರದಲ್ಲಿ ಸೃಷ್ಟಿಯಾದ ಗೊಂದಲ ನಾನು ಜೆಡಿಎಸ್ ತೊರೆಯಲು ಪ್ರಮುಖ ಕಾರಣ. ಜೆಡಿಎಸ್ ಪಕ್ಷದಿಂದ ಆರೇಳು ತಿಂಗಳಿನಿಂದ ಅಂತರ ಕಾಯ್ದುಕೊಂಡಿದ್ದೆ. ಇದು ತಾಲೂಕಿನ ಎಲ್ಲರಿಗೂ ಗೊತ್ತಿರುವಂಥ್ದದೇ. ಪಕ್ಷದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ. ಹಾಗಂತ ಅವರನ್ನು ಟೀಕಿಸುತ್ತಿಲ್ಲ. ಜೆಡಿಎಸ್‌ಗೆ 15 ರಿಂದ 20 ಸಾವಿರ ಮತದಾರರಿದ್ದ ಕ್ಷೇತ್ರವನ್ನು ಇವತ್ತು 90 ಸಾವಿರ ಮತದಾರರ ತನಕ ಕೊಂಡೊಯ್ದಿದ್ದೇವೆ. ಇದು ಸುಲಭದ ಮಾತಲ್ಲ."
"ಜೆಡಿಎಸ್‌ನ ಹಲವರು ನನ್ನ ಮೇಲೆ ಟೀಕಾಪ್ರಹಾರ ಮಾಡಿದರು. ಆದರೆ ನಾನು ಒಂದು ಪಕ್ಷದಲ್ಲಿದ್ದು ಅವರ ಬಗ್ಗೆ ನಿಷ್ಠುರವಾಗಿ ಮಾತನಾಡಲು ಸಾಧ್ಯವಾಗದು. ಇಷ್ಟು ದಿವಸ ಅಲ್ಲಿದ್ದು ಉತ್ತಮ ಶಾಸಕ ಎನಿಸಿಕೊಂಡಿದ್ದೆ, ಮುಂದೆಯೂ ನಿಮ್ಮೆಲ್ಲರ ಸಹಕಾರದಿಂದ ನಿಮ್ಮ ಅಭಿಪ್ರಾಯದಂತೆ ನಾನು ಯಾವ ಪಕ್ಷ ಸೇರಬೇಕು ಅಂತ ಹೇಳಿದರೆ ಆ ಪಕ್ಷ ಸೇರುತ್ತೇನೆ" ಎಂದು ತಮ್ಮ ಅಭಿಮಾನಿಗಳಿಗೆ ಆಯ್ಕೆ ಮಾಡಲು ಹೇಳಿದರು.
ಯಾವ ಪಕ್ಷ ಸೇರಬೇಕು ಅಂತ ಶಿವಲಿಂಗೇಗೌಡರು ಹೇಳುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು, "ಕಾಂಗ್ರೆಸ್ ಪಕ್ಷ ಸೇರಿ, ಬಿಜೆಪಿ ಬೇಡ ಎಂದು ಘೋಷಣೆಗಳನ್ನು ಕೂಗಿದರು. ನೀವು ಯಾವ ಪಕ್ಷ ಸೂಚಿಸಿದ್ದೀರೋ ಅದನ್ನು ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳುತ್ತೇನೆ. ಜೆಡಿಎಸ್ ಶಾಸಕನಾಗಿರುವ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನಾನು ಕಾಂಗ್ರೆಸ್ ಸೇರುವ ಹಾಗಿಲ್ಲ. ನನ್ನ ವಕೀಲರ ಮಾರ್ಗದರ್ಶನ ಪಡೆದು ಯಾವ ರೀತಿ ಪಕ್ಷಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷ ಸೇರಬೇಕು ಅಂತ ಕಾನೂನಾತ್ಮಕವಾಗಿ ತಿಳಿದುಕೊಂಡು ದಿನಾಂಕ ನಿಗದಿಪಡಿಸಿ ಸೇರ್ಪಡೆಗೊಳ್ಳುತ್ತೇನೆ" ಎಂದರು.
ಇದನ್ನೂ ಓದಿ :'ಪಕ್ಷದಲ್ಲಿದ್ದಾಗ ಕುಟುಂಬ ರಾಜಕಾರಣ ಗೊತ್ತಾಗಿಲ್ವಾ?': ಶಿವಲಿಂಗೇಗೌಡರ ವಿರುದ್ಧ ಹೆಚ್ಡಿಕೆ ವಾಗ್ದಾಳಿ