ಹಾಸನ: ಪಶುಸಂಗೋಪನೆ ಮಾಡುವ ರೈತರು ಕೊವಿಡ್ ಲಾಕ್ಡೌನ್ ಬಳಿಕ ಆರ್ಥಿಕ ಹೊಡೆತಕ್ಕೆ ಸಿಕ್ಕಿ ತತ್ತರಿಸಿದ್ದಾರೆ. ಇದೀಗ ಹಾಸನದ ಶಂಖ ಗ್ರಾಮಸ್ಥರಿಗೆ ಹಾಸನ ಕೆಎಂಎಫ್ ನಿಂದ ಮೇವು ಪೂರೈಕೆ ಮಾಡದೇ ಹಾಲು ಉತ್ಪಾದಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ, ಹಾಸನ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಗೆ ಶಂಖ ಗ್ರಾಮಸ್ಥರು ಮುತ್ತಿಗೆ ಹಾಕಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಹಾಲು ಉತ್ಪಾಕರ ಸಂಘದಲ್ಲಿ ಎದ್ದಿರೋ ವಿವಾದದ ಹಿನ್ನೆಲೆ ಶಂಖ ಗ್ರಾಮದಲ್ಲಿ ಕೆಎಂಎಫ್ ನಿಂದ ಪಶು ಸಂಗೋಪನೆ ಆಹಾರ ಪೂರೈಕೆಯನ್ನೇ ನಿಲ್ಲಿಸಿದ್ದಾರೆ. ಪರಿಣಾಮ ಶಂಖ ಗ್ರಾಮದ ಹಾಲು ಉತ್ಪಾದಕ ರೈತರು ಕಂಗಾಲಾಗಿದ್ದಾರೆ.
ಮೇವು ಪೂರೈಕೆ ಮಾಡದ ಹಿನ್ನೆಲೆ ಶಂಖ ಗ್ರಾಮಸ್ಥರ ಆಕ್ರೋಶ ಈ ಬಗ್ಗೆ ಹಾಸನ ಸಹಕಾರ ಸಂಘಗಳ ಮೇಲಧಿಕಾರಿಗಳನ್ನ ಕೇಳಿದರೆ ಈ ಪ್ರಕರಣ ನಮ್ಮ ಗಮನಕ್ಕೆ ಬಂದಿದ್ದು, ರೈತರಿಗೆ ಪಶು ಆಹಾರ ನೀಡುವಂತೆ ತಮ್ಮ ಕೆಳಗಿನ ಸಿಬ್ಬಂದಿಗೆ ಪತ್ರ ಬರೆದು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆ ಹರಿಸೋದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪಶು ಆಹಾರ ನೀಡದೇ ಸತಾಯಿಸುತ್ತಿದ್ದಾರಾ?
ಇನ್ನು ಕೆಲ ತಿಂಗಳ ಹಿಂದೆ ಇದೇ ಶಂಖ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ವಿಚಾರವಾಗಿ ಹಾಸನ ತಾಲೂಕು ಸಹಾಯಕ ಉಪ ನಿಂಬಂಧಕ ಸುನಿಲ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹಾಗೇ ಈ ಹಾಲಿನ ಡೈರಿ ವಿಚಾರವಾಗಿ ದೊಡ್ಡ ಗಲಾಟೆ ನಡೆದಿತ್ತು. ಡೈರಿ ಕಾರ್ಯದರ್ಶಿ ಅಧಿಕಾರ ಹಂಚಿಕೆ ವಿಚಾರವಾಗಿ ನಡೆದ ಈ ಗಲಾಟೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಇತ್ತು ಅನ್ನೋದು ಒಪನ್ ಸೀಕ್ರೆಟ್. ಆದರೆ, ಈ ಎಲ್ಲ ಕಾರಣದಿಂದ ಇದೀಗ ಶಂಖ ಗ್ರಾಮದವರ ಹಾಲು ಉತ್ಪಾದಕರಿಗೆ ಪಶು ಆಹಾರ ನೀಡದೇ ಸತಾಯಿಸುತ್ತಿರೋದು ನಿಜಕ್ಕೂ ನೋವಿನ ಸಂಗತಿ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದ H R ಕೃಷ್ಣಪ್ಪನವರ ಮನೆ ಮೇಲೆ ಎಸಿಬಿ ದಾಳಿ!
ಯಾರದ್ದೋ ಮೇಲಿನ ಸಿಟ್ಟಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ, ಪಶು ಆಹಾರ ನೀಡುವ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದೆ ಎನ್ನುವ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ. ಇನ್ನಾದರೂ ಈ ಪ್ರಕರಣಕ್ಕೆ ತೆರೆ ಬೀಳಲಿ ಅನ್ನೋದು ಶಂಖ ಗ್ರಾಮಸ್ಥರ ಒತ್ತಾಯವಾಗಿದೆ.