ಹಾಸನ: ಸಕಲೇಶಪುರ ತಾಲೂಕು ಪಂಚಾಯಿತಿ ಸದಸ್ಯರೊಬ್ಬರ ಅಪಹರಣವಾಗಿದ್ದು, ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ, ಕೂಡಲೇ ಅಪಹರಣಕ್ಕೊಳಗಾದವರನ್ನು ಹುಡುಕಿ ಕೊಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.
ಅಪಹರಣವಾದ ಸದಸ್ಯರನ್ನು ಶೀಘ್ರ ಹುಡುಕಿಕೊಡಿ....ಪೊಲೀಸರಿಗೆ ಹೆಚ್.ಕೆ ಕುಮಾರಸ್ವಾಮಿ ಮನವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕಲೇಶಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಇತರರು ಸೇರಿ ಜುಲೈ 2 ರಂದು ಐಗೂರು ಕ್ಷೇತ್ರದ ಜೆಡಿಎಸ್ ಸದಸ್ಯ ಶಿವಪ್ಪ ಎಂಬುವರನ್ನು ಅಪಹರಿಸಿದ್ದಾರೆ. ಕೆಲ ದಿನಗಳ ಹಿಂದೆ ಜೆಡಿಎಸ್ ಪಕ್ಷದ 4 ಜನ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ 4 ಜನ ಸದಸ್ಯರು ಸೇರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲು ನಿರ್ಧರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದು, ಜುಲೈ 10ಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲು ದಿನಾಂಕ ನಿಗದಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ಅಪಹೃತ ಶಿವಪ್ಪನನ್ನು ಹುಡುಕಿಕೊಡಬೇಕು ಎಂದು ಆಗ್ರಹಿಸಿದರು. ತಾಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯ ಸ್ಥಾನವಿದ್ದು, 4 ಜೆಡಿಎಸ್, 5 ಕಾಂಗ್ರೆಸ್ ಹಾಗೂ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದೆ. ಬಿಜೆಪಿಯ ಶ್ವೇತಾ ಅವರನ್ನು ಎರಡೂವರೆ ವರ್ಷದವರೆಗೆ ಮಾತ್ರ ಒಡಂಬಡಿಕೆಯ ಆಧಾರದಲ್ಲಿ ಅಧ್ಯಕ್ಷೆಯನ್ನಾಗಿ ಮಾಡಲಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಗೆ 8 ಜನ ಸದಸ್ಯರ ಬಹುಮತ ಬೇಕಾಗಿದೆ. ಹಾಗಾಗಿ ಈ ಅಪಹರಣವಾಗಿದೆ.
ಈ ಬಗ್ಗೆ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷೆ ಶ್ವೇತಾ ಹಾಗೂ ಅವರ ಪತಿ ಪ್ರಸನ್ನ, ಸಹಚರರಾದ ರವಿ, ಆಕಾಶ್ ಮತ್ತು ವಿಜಯ್ ವಿರುದ್ಧ ದೂರು ಕೊಡಲಾಗಿದೆ. ಆದರೆ ಶ್ವೇತಾ ಅವರನ್ನೇ ಅಪಹರಣ ಮಾಡಿದ್ದಾರೆ ಎಂದು ನಮ್ಮ ವಿರುದ್ಧ ಬಿಜೆಪಿಯವರೂ ದೂರು ನೀಡಿದ್ದಾರೆ. ಈ ದೂರನ್ನು ಸೂಕ್ತ ರೀತಿ ಪರಿಶೀಲಿಸಿ ಕೈಬಿಡಬೇಕೆಂದು ಶಾಸಕರು ಒತ್ತಾಯಿಸಿದರು.
ಸಭೆಯಲ್ಲಿ ಸಕಲೇಶಪುರ ಜಿಲ್ಲಾ ಪಂಚಾಯಿತಿ ಸದಸ್ಯೆ ಉಜ್ಮಾ ರಿಜ್ವಿ, ತಾಲೂಕು ಪಂಚಾಯಿತಿ ಸದಸ್ಯೆ ಚೈತ್ರಾ, ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಸದಸ್ಯ ಶಿವಪ್ಪ ಅವರ ಪತ್ನಿ ನೀಲಾ ಇತರರು ಉಪಸ್ಥಿತರಿದ್ದರು.