ಸಕಲೇಶಪುರ (ಹಾಸನ): ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸ್ವಯಂಪ್ರೇರಿತರಾಗಿ ಹಾಫ್ ಲಾಕ್ ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಹೇಳಿದರು.
ಸಕಲೇಶಪುರ: ಕೊರೊನಾ ನಿಯಂತ್ರಣಕ್ಕೆ ಹಾಫ್ ಲಾಕ್ಡೌನ್ ನಿರ್ಧಾರ - Sakleshpur Half Lock Down
ಯಾವುದೇ ಪ್ರಕರಣಗಳೇ ಇಲ್ಲ ಎನ್ನಲಾಗುತ್ತಿದ್ದ ಸಕಲೇಶಪುರದಲ್ಲಿ ಇತ್ತೀಚೆಗೆ ಸೋಂಕಿತರು ಪತ್ತೆಯಾಗುತ್ತಿದ್ದು, ಪಟ್ಟಣದಲ್ಲಿ ಸ್ವಯಂಪ್ರೇರಿತರಾಗಿ ಹಾಫ್ ಲಾಕ್ ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ಹೇಳಿದರು
![ಸಕಲೇಶಪುರ: ಕೊರೊನಾ ನಿಯಂತ್ರಣಕ್ಕೆ ಹಾಫ್ ಲಾಕ್ಡೌನ್ ನಿರ್ಧಾರ Sakleshpur: Half Lockdown Decision of City to Control Corona](https://etvbharatimages.akamaized.net/etvbharat/prod-images/768-512-7913251-930-7913251-1594025784244.jpg)
ಸೋಮವಾರ ಪಟ್ಟಣದ ಪುರಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ವರ್ತಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಾಸನ ಸೇರಿದಂತೆ ಪಕ್ಕದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲೂ ಹಲವಾರು ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಆದರೆ ತಾಲೂಕಿನಲ್ಲಿ ಒಂದೂ ಪ್ರಕರಣವಿರಲಿಲ್ಲ. ಈಗ ಒಂದೊಂದೆ ಸೋಂಕು ಪ್ರಕರಣ ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವರ್ತಕರು, ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ವಾರದ 6 ದಿನ ಮುಂಜಾನೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಂಗಡಿಗಳನ್ನು ತೆರೆದು ಉಳಿದಂತೆ ಬಂದ್ ಮಾಡಲು ತಿಳಿಸಲಾಗಿದೆ. ಜೊತೆಗೆ ಭಾನುವಾರದಂದು ಸರ್ಕಾರದ ಆದೇಶದಂತೆ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಮಧ್ಯಾಹ್ನ 3 ಗಂಟೆಯ ನಂತರ ಅಗತ್ಯ ವೈದ್ಯಕೀಯ ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಕೆಲವು ಹೋಟೆಲ್ ಮಾಲಿಕರು, ಕಚೇರಿಗಳಿಗೆ ಕೆಲಸ ಮಾಡಲು ಬರುವವರಿಗೆ ಊಟದ ತೊಂದರೆಯಾಗುತ್ತದೆ. ಈ ಹಿನ್ನೆಲೆ 4 ಗಂಟೆಯವರೆಗೆ ಹೋಟೆಲ್ಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು. ಇನ್ನೂ ಕೆಲವು ಜನಪ್ರತಿನಿಧಿಗಳು ಈ ಹಿಂದಿನಂತೆ ದಿನ ಬಿಟ್ಟು ದಿನ ಲಾಕ್ ಡೌನ್ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.