ಸಕಲೇಶಪುರ: ಅಸಮಾಧಾನದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತಿ ಅಧ್ಯಕ್ಷೆ ಶ್ವೇತಾ ಪ್ರಸನ್ನ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ತಾ.ಪಂ ನಲ್ಲಿ ಜೆಡಿಎಸ್ 5, ಕಾಂಗ್ರೆಸ್ 4, ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಜೆಡಿಎಸ್‌ಗೆ ಸೆಡ್ಡು ಹೊಡೆಯಲು ಕಾಂಗ್ರೆಸ್, ಬಿಜೆಪಿ ಜೊತೆ ಕೈಜೋಡಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಶ್ವೇತಾಪ್ರಸನ್ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಯಡೆಹಳ್ಳಿ ಮಂಜುನಾಥ್ ಮೊದಲ ಅವಧಿಗೆ ಆಯ್ಕೆಯಾಗಿದ್ದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಸಿಮೆಂಟ್ ಮಂಜುನಾಥ್ ಆಯ್ಕೆಯಾಗಿದ್ದರು.
ಮೊದಲ 12 ತಿಂಗಳು ಯಡೆಹಳ್ಳಿ ಮಂಜುನಾಥ್ ಉಪಾಧ್ಯಕ್ಷರಾಗಿದ್ದು, ನಂತರ ಸುಮಾರು 24 ತಿಂಗಳು ಉದಯ್ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿ ರಾಜೀನಾಮೆ ಸಲ್ಲಿಸಿದ್ದರಿಂದ ನಂತರ ಕೃಷ್ಣೇಗೌಡ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡಿಸಲು ಬರೆದ ಪತ್ರ ಕಳೆದ ನವೆಂಬರ್ ತಿಂಗಳ ವೇಳೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಿಮೆಂಟ್ ಮಂಜುರವರಿಂದ ರಾಜೀನಾಮೆ ಪಡೆದು ಉದಯ್‌ರವರಿಗೆ ನೀಡಲಾಗಿತ್ತು. ಈ ಸಂದರ್ಭದಲ್ಲೇ ತಾಲೂಕು ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಬೇಕೆಂಬ ಒತ್ತಡಗಳಿದ್ದರು ಸಹ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಲು ಒಪ್ಪದಿದ್ದರಿಂದ ಕಳೆದ ಜನವರಿ ತಿಂಗಳಿನಿಂದ ಅಧ್ಯಕ್ಷರನ್ನು ಕೆಳಗಿಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ ಆ ಸಮಯದಲ್ಲಿ ಒಂದಿಬ್ಬರು ಸದಸ್ಯರು ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದರಿಂದ ಈ ಪ್ರಕ್ರಿಯೆಗೆ ಅಡ್ಡಿಯುಂಟಾಗಿತ್ತು.
ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ನ 8 ಸದಸ್ಯರುಗಳು ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ಪತ್ರ ಬರೆದಿದ್ದು, ಈ ಹಿನ್ನೆಲೆಯಲ್ಲಿ ಜುಲೈ 10 ನೇ ತಾರೀಖಿನಂದು ತಾ.ಪಂ. ಯಲ್ಲಿ ಸಭೆ ಕರೆಯಲಾಗಿದೆ.
ಕಾಂಗ್ರೆಸ್ ನ ಯಡೆಹಳ್ಳಿ ಮಂಜುನಾಥ್, ಉದಯ್, ಕೃಷ್ಣೇಗೌಡ, ಶಿವಮ್ಮ , ಜೆಡಿಎಸ್ ನ ಚಂದ್ರಮತಿ, ಚೈತ್ರಾ, ರುಕ್ಮಿಣಿ ಮಲ್ಲೇಶ್, ಶಿವಪ್ಪ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದು, ಕಾಂಗ್ರೆಸ್ ನ ಅನುಷ್ಕಾ, ಬಿಜೆಪಿಯ ಸಿಮೆಂಟ್ ಮಂಜುನಾಥ್ ಮಾತ್ರ ಸಹಿ ಮಾಡಿಲ್ಲ. ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಬಿಜೆಪಿ ಪಕ್ಷದ ಕೆಲವು ಮುಖಂಡರು ಅಧ್ಯಕ್ಷರ ಪತಿಯ ವಿರುದ್ಧ ಮುನಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲ ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರುಗಳಿಗೆ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ.